ಕೂಡಿಗೆ, ಜು. ೧೨: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಮತ್ತು ಕಾಡು ಕೋಣಗಳ ಹಾವಳಿ ಮಿತಿಮೀರಿದ್ದು ಭಾರೀ ಪ್ರಮಾಣದಲ್ಲಿ ಕೃಷಿ ಬೆಳೆಗಳನ್ನು ಹಾಳು ಮಾಡುತ್ತಿವೆ.
ಕಾಡಾನೆಗಳು ಮೀನುಕೊಲ್ಲಿ ಮೀಸಲು, ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಲಗ್ಗೆಯಿಟ್ಟು, ಚಿನ್ನೂರು ಮತ್ತು ದಾಸವಾಳ ಗ್ರಾಮಗಳ ತೋಟ ಹಾಗೂ ಕೃಷಿ ಭೂಮಿಯನ್ನು ಹಾಳು ಮಾಡುತ್ತಿವೆ.
ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷರೂ ಆದ ಕೃಷಿಕ ಸಿ.ಎಲ್.ವಿಶ್ವ ಅವರ ಜಮೀನಿಗೆ ದಾಳಿ ನಡೆಸಿದ ಕಾಡಾನೆಯೊಂದು ಕಳೆದೊಂದು ವಾರದಿಂದ ನಿರಂತರವಾಗಿ ಉಪಟಳ ನೀಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡಾನೆ ದಾಳಿಗೆ ಕಾಫಿ, ಬಾಳೆ ಹಾಗೂ ಅಡಿಕೆ ಗಿಡಗಳು ನೆಲಕಚ್ಚಿವೆ. ಹಲಸು ಮತ್ತು ಕಿತ್ತಳೆ ಗಿಡಗಳ ಫಸಲನ್ನು ನಾಶಗೊಳಿಸಿ ಮನೆಯ ಸಮೀಪದ ಶೆಡ್ನೊಳಗೆ ಹಂದಿಗಳಿಗೆ ತಂದಿಟ್ಟಿದ್ದ ತವಡು ಪುಡಿಯನ್ನು ಲಪಟಾಯಿಸಿ ಸ್ವಾಹ ಮಾಡಿರುವ ಕಾಡಾನೆ ಬಿತ್ತನೆಗೆ ಇರಿಸಿದ್ದ ಎರಡು ಮೂಟೆ ಬಿತ್ತನೆ ಭತ್ತವನ್ನು ಕೂಡ ತಿಂದು ಮುಗಿಸಿರುವುದು ಕಂಡುಬAದಿದೆ. ನಾಟಿ ಮಾಡಲು ಸಿದ್ಧತೆ ಮಾಡಿದ ಸಸಿ ಮಡಿಗಳ ಭತ್ತದ ಗದ್ದೆಗಳಲ್ಲಿ ಅಡ್ಡಾಡಿ ಹಾನಿಗೊಳಿಸಿದೆ.
ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆಯವರು ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಿ.ಎಲ್.ವಿಶ್ವ ಆಗ್ರಹಿಸಿದ್ದಾರೆ.
ಆನೆ ಕಂದಕದಲ್ಲಿ ಈಗಾಗಲೇ ಹೂಳು ತುಂಬಿಕೊAಡಿದೆ, ಕಾಡಾನೆಗಳು ಕಂದಕದಲ್ಲಿ ಇಳಿದು ಸರಾಗವಾಗಿ ದಾಟಿ ಸಮೀಪದ ತೋಟಗಳಿಗೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಮರ್ಪಕವಾಗಿ ಹೂಳೆತ್ತಬೇಕಿದೆ. ಹ್ಯಾಂಗಿAಗ್ ಫೆನ್ಸ್ಗಳು ಕಾಡು ಪಾಲಾಗಿದೆ. ಇದರಿಂದಾಗಿ ಕಾಡಾನೆಗಳು ಸಲೀಸಾಗಿ ಕೃಷಿ ಭೂಮಿಯತ್ತ ಲಗ್ಗೆಯಿಟ್ಟು ಬೆಳೆ ಹಾನಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಿದ್ದ ಕುಶ ಆನೆ ಮತ್ತೆ ಈ ಭಾಗಕ್ಕೆ ಆಗಮಿಸಿದ್ದು, ನಿರಂತರವಾಗಿ ಬೆಳೆ ಹಾನಿ ಮಾಡುತ್ತಿದೆ.
ಇದರೊಂದಿಗೆ ಹೊಸ ಕಾಡಾನೆಯೊಂದು ಈ ಭಾಗದಲ್ಲಿ ನಿರಂತರ ಉಪಟಳ ನೀಡುತ್ತಿದೆ. ಈ ವ್ಯಾಪ್ತಿಯ ಅನೇಕ ರೈತರ ಜಮೀನಿಗೆ ದಾಳಿ ಮಾಡಿ ಅಪಾರ ಬೆಳೆ ನಷ್ಟ ಪಡಿಸಿವೆ. ಬೆಳೆ ಹಾನಿ, ಜೀವಹಾನಿಗೆ ಪರಿಹಾರ ಒದಗಿಸುವುದು ಮಾತ್ರವಲ್ಲದೆ ಶಾಶ್ವತ ಪರಿಹಾರ ಕ್ರಮಕ್ಕೆ ಜಿಲ್ಲೆಯ ಹೊಸ ಶಾಸಕದ್ವಯರು ಚಿಂತನೆ ಹರಿಸಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಮೀನುಕೊಲ್ಲಿ ಅರಣ್ಯ ಪ್ರದೇಶಗಳ ಕಡೆಯಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆಯವರಿಗೆ ಒಂದು ವಾರದ ಗಡುವು ನೀಡಲಾಗಿದೆ. ಕಂದಕಗಳ ಸರಿಪಡಿಸುವಿಕೆ ಮತ್ತು ಸೋಲಾರ್ ವಿದ್ಯುತ್ ವ್ಯವಸ್ಥೆ, ಹ್ಯಾಂಗಿAಗ್ ಫೆನ್ಸ್ ವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ ಅರಣ್ಯ ಇಲಾಖೆಯ ಕಚೇರಿಯ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ಎಲ್. ವಿಶ್ವ ತಿಳಿಸಿದ್ದಾರೆ. ಈ ಸಂದರ್ಭ ಐಯ್ಸಡರ್ ಯತೀಶ್, ಬಾಲಕೃಷ್ಣ, ಸೂರ್ಯಕುಮಾರ್, ಸುಬ್ರಾಯ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು. ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಇಲಾಖೆಯ ಅಧಿಕಾರಿ ಶಿವರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- ನಾಗರಾಜ ಶೆಟ್ಟಿ