ವೀರಾಜಪೇಟೆ, ಜು. ೧೨: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಮಲೆತಿರಿಕೆ ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಶಾಶ್ವತವಾಗಿ ಸೂರು ನೀಡಲು ಉದ್ದೇಶಿಸಿರುವ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಅಂಬಟ್ಟಿಯಲ್ಲಿ ಗುರುತಿಸಲಾದ ಎಂಟು ಎಕರೆ ಸ್ಥಳವನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಪರಿಶೀಲಿಸಿದರು.

ಮಳೆಗಾಲದಲ್ಲಿ ತೊಂದರೆ ಇರುವ ಬೆಟ್ಟದ ಮೇಲೆ ವಾಸಿಸುವ ಸುಮಾರು ಎಪ್ಪತ್ತು ಕುಟುಂಬಗಳಿಗೆ ಶಾಶ್ವತವಾಗಿ ಸೂರು ನೀಡುವ ಉದ್ದೇಶದಿಂದ ವೀರಾಜಪೇಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಅಂಬಟ್ಟಿ ಬಳಿ ಎಂಟು ಎಕರೆ ಭೂಮಿಯನ್ನು ವೀರಾಜಪೇಟೆ ಪುರಸಭೆ ಖರೀದಿಸಿದೆ. ಶಾಸಕರು ಸ್ಥಳ ಪರಿಶೀಲನೆ ನಡೆಸಿ ಆ ಪ್ರದೇಶದಲ್ಲಿ ಕಲ್ಲು ಬಂಡೆಗಳು, ಕಾಡು ಮರಗಳು ಬೆಳೆದಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮರವನ್ನು ತೆರವುಗೊಳಿಸುವಂತೆ ಸೂಚಿಸಿದರು.

ಬಳಿಕ ಸ್ಥಳದ ನಕ್ಷೆಯನ್ನು ವೀಕ್ಷಣೆ ಮಾಡಿದ ಶಾಸಕರು ಮೊದಲು ಮುಂಭಾಗದಲ್ಲಿ ನಿವೇಶನದ ಕಾಮಗಾರಿ ಆರಂಭಿಸುವAತೆ ತಹಶೀಲ್ದಾರ್ ರಾಮಚಂದ್ರ ಹಾಗೂ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ತಿಳಿಸಿದರು. ನಂತರದಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆಸುವಂತೆ ಮಾಹಿತಿ ನೀಡಿದರು. ಈಗಾಗಲೇ ಈ ಜಾಗದ ಅಕ್ಕಪಕ್ಕದ ನಿವಾಸಿಗಳು ಕಾಮಗಾರಿ ಸಮಯದಲ್ಲಿ ಈಗಿರುವ ರಸ್ತೆಯ ಅಗಲೀಕರಣಗೊಳಿಸಲು ಮನವಿ ಮಾಡಿದರು.

ಈ ಸಂದರ್ಭ ಕಂದಾಯ ಅಧಿಕಾರಿ ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಉಪಾಧ್ಯಕ್ಷ ಆಯುಭ್, ಪುರಸಭೆ ಸದಸ್ಯರಾದ ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ, ರಜನಿಕಾಂತ್ ಸೇರಿದಂತೆ ಹಲವಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.