ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೧೧: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ವನ್ಯಜೀವಿ- ಮಾನವ ಸಂಘರ್ಷ ತಡೆಯಲು ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯ ವಿಚಾರಣೆ ಸಂದರ್ಭ ಈ ನಿರ್ದೇಶನ ನೀಡಿರುವ ಹೈಕೋರ್ಟ್ ಕೆಲವು ನಿರ್ದೇಶನಗಳನ್ನೂ ನೀಡಿದೆ.

ವನ್ಯಜೀವಿ - ಮಾನವ ಸಂಘರ್ಷಕ್ಕೆ ತಡೆಯುವ ನಿಟ್ಟಿನಲ್ಲಿ ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವಂತೆ ಕೋರಿ ಕರ್ನಾಟಕ ಬೆಳೆಗಾರರ ಸಂಘ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ. ಜೆ. ಎಸ್ ಕಮಲ್ ಅವರಿದ್ದ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದೆ.

ಹೈಕೋರ್ಟಿನ ನಿರ್ದೇಶನದ ಪ್ರಕಾರ ತ್ವರಿತ ಕಾರ್ಯಾಚರಣೆಗಾಗಿ ಪ್ರತೀ ತಾಲೂಕು ಕೇಂದ್ರದಲ್ಲಿ ೨೪/೭ ರಂತೆ ಕೆಲಸ ಮಾಡುವ ಗ್ರೀವಿಯನ್ಸ್ ಸೆಲ್ (ದೂರು ಕೋಶ) ಸ್ಥಾಪಿಸುವಂತೆ ಆದೇಶಿಸಿದೆ. ಅಲ್ಲದೆ ಸಾರ್ವಜನಿಕರಿಂದ ವನ್ಯಜೀವಿ -ಮಾನವ ಸಂಘರ್ಷದ ಕುರಿತು ಮಾಹಿತಿ ಪಡೆಯಲು ದೂರು ಕೋಶಗಳಿಗೆ ಸೂಕ್ತ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ಕಂಟ್ರೋಲ್ ರೂಂಗಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲಾಸ್ಪತ್ರೆಗಳಿಗೆ ತಕ್ಷಣ ಲಭ್ಯವಾಗುವಂತೆ ವ್ಯವಸ್ಥೆ ಮಾಡಿ ಸಂಘರ್ಷದಲ್ಲಿ ತೊಂದರೆಗೊಳಗಾಗುವವರಿಗೆ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ ದೂರು ಕೋಶವು ಸ್ವೀಕರಿಸಿದ ದೂರುಗಳನ್ನು ವಿಲೇವಾರಿ ಮಾಡಿರುವ ಕ್ರಮದ ಬಗ್ಗೆ ನಿಗಾ ವಹಿಸಲು ಮತ್ತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲು ವಲಯ ಅರಣ್ಯ ಅಧಿಕಾರಿ ಮತ್ತು ತಾಲೂಕು ತಹಶೀಲ್ದಾರ್ ಅವರು ಪ್ರತೀ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ಪರಿಶೀಲನೆ ನಡೆಸಬೇಕು. ಈ ಕುರಿತು ವರದಿ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ತಕ್ಷಣ ರವಾನಿಸಿ ಪರಿಹಾರ ಕ್ರಮಗಳನ್ನು ಚುರುಕಾಗಿ ತೆಗೆದುಕೊಳ್ಳಬೇಕು ಎಂದು ಪೀಠ ನಿರ್ದೇಶಿಸಿದೆ.

(ಮೊದಲ ಪುಟದಿಂದ) ಸರ್ಕಾರ ರಚನೆ ಮಾಡಲಿರುವ ನೂತನ ದೂರು ಕೋಶದ ಕುರಿತು ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಎಲ್ಲ ರೀತಿಯ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಗ್ರಾಮ ಪಂಚಾಯತ್‌ಗಳ ನೋಟೀಸ್ ಬೋರ್ಡ್ನಲ್ಲಿ ಹಾಕಬೇಕು ಎಂದು ಪೀಠ ಹೇಳಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ವನ್ಯಜೀವಿ - ಮಾನವ ಸಂಘರ್ಷ ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ಕಾಡಾನೆಗಳಿಗೆ ಸುರಕ್ಷತಾ ವಾಸತಾಣದ ಕಾರಿಡಾರ್ ಮಾಡಬೇಕು. ವನ್ಯಜೀವಿ - ಮಾನವ ಸಂಘರ್ಷ ತಡೆಯಲು ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ ಅಗತ್ಯ ಮಾನವ ಸಂಪನ್ಮೂಲ, ವಾಹನ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಲಭ್ಯ ಒದಗಿಸಬೇಕು. ಸಂಘರ್ಷ ಕಂಡು ಬರುತ್ತಿದ್ದಂತೆ ಸ್ಥಳೀಯರಿಗೆ ಗುಂಪು ಸಂದೇಶ(ಬಲ್ಕ್ ಮೆಸೇಜ್)ಗಳನ್ನು ರವಾನೆ ಮಾಡುವ ತಂತ್ರಜ್ಞಾನ ಅಳವಡಿಸಿ ಎಚ್ಚರಗೊಳ್ಳುವಂತೆ ಮಾಡಬೇಕು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಅರಣ್ಯ ಪಡೆ ಮುಖ್ಯಸ್ಥರು ಮತ್ತು ವನ್ಯಜೀವಿ ಪರಿಪಾಲಕರು ವರ್ಷಕ್ಕೆ ನಾಲ್ಕು ಬಾರಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಸಂಬAಧ ಸಭೆಗಳನ್ನು ನಡೆಸಿ ರಾಜ್ಯದಲ್ಲಿ ವರದಿ ಆಗುತ್ತಿರುವ ವನ್ಯಜೀವಿ-ಮಾನವ ಸಂಘರ್ಷದ ಮೇಲ್ವಿಚಾರಣೆ ನಡೆಸಿ ತ್ವರಿತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.