ಮಡಿಕೇರಿ, ಜು. ೧೧: ಮಡಿಕೇರಿ ನಗರಸಭೆ ಸದಸ್ಯ ಮತ್ತು ಮಡಿಕೇರಿ ಕೊಡವ ಸಮಾಜ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲೆ ಗುಂಪು ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗರ್ವಾಲೆ ಕೊಡವ ಸಮಾಜ ಆಗ್ರಹಿಸಿದೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅಧ್ಯಕ್ಷ ಸರ್ಕಂಡ ಎ. ಗಣಪತಿ, ಕಾರ್ಯದರ್ಶಿ ತಾಚಮಂಡ ಎನ್. ಈರಪ್ಪ ಮತ್ತು ಪದಾಧಿಕಾರಿಗಳು, ಆರೋಪಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಂಡು, ಮುಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು, ನಗರಸಭಾ ಸದಸ್ಯನಿಗೇ ರಕ್ಷಣೆ ಇಲ್ಲದೆ ಗುಂಪು ಹಲ್ಲೆ ಆಗುತ್ತಿರುವುದು ಭವಿಷ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯ ಲಕ್ಷಣ. ಕಾನೂನು ಸಂಬAಧಿತ ಏನೇ ಭಿನ್ನಾಭಿಪ್ರಾಯ ಇದ್ದರೂ ಸಂಭAದಿಸಿದ ಇಲಾಖೆಗಳ ಮೂಲಕ ಕಾನೂನಾತ್ಮಕವಾಗಿ ಕ್ರಮ ಜರುಗಿಸಬೇಕೇ ವಿನಹ, ಕಾನೂನು ಕೈಗೆತ್ತಿಕೊಳ್ಳುವುದಲ್ಲ. ಜಿಲ್ಲೆಯಲ್ಲಿ ಗೊಂದಲ ಮತ್ತು ಅಶಾಂತಿಯ ವಾತಾವರಣ ಸೃಷ್ಟಿಯಾಗುವುದನ್ನು ಈಗಲೇ ತಡೆಯಬೇಕು. ತಪ್ಪಿದಲ್ಲಿ ವಿವಿಧ ಸಂಘಟನೆಗಳು ತೆಗೆದುಕೊಳ್ಳುವ ಕ್ರಮಕ್ಕೆ ಗರ್ವಾಲೆ ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊನ್ನಂಪೇಟೆ ಕೊಡವ ಸಮಾಜ ಆಗ್ರಹ

ಶ್ರೀಮಂಗಲ, ಜು. ೧೧: ಮಡಿಕೇರಿ ನಗರಸಬೆ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾಗಿರುವ ಕಾಳಚಂಡ ಅಪ್ಪಣ್ಣ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವುದನ್ನು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪೊನ್ನಂಪೇಟೆ ಸಮಾಜದ ಆಡಳಿತ ಮಂಡಳಿ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಜನಪ್ರತಿನಿಧಿಯಾಗಿರುವ ಅಪ್ಪಣ್ಣ ಅವರ ಮೇಲೆ ದುಷ್ಕರ್ಮಿಗಳು ಹಾಡಹಗಲೇ ನಡು ರಸ್ತೆಯಲ್ಲಿ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ದುಷ್ಕರ್ಮಿಗಳ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಕೇವಲ ಬಂಧಿಸಿ ಬಿಡುಗಡೆ ಮಾಡದೇ ಇಂತಹ ಪ್ರಕರಣಗಳು ಮುಂದೆAದು ಮರುಕಳಿಸದಂತೆ ಕಠಿಣವಾದ ಸೆಕ್ಷನ್‌ನಡಿ ಇಂತಹ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಕ್ಕಂದೂರು ಕೊಡವ ಸಮಾಜ ಖಂಡನೆ

ಮಡಿಕೇರಿ, ಜು. ೧೧: ನಗರಸಭಾ ಸದಸ್ಯ ಹಾಗೂ ಮಕ್ಕಂದೂರು ಕೊಡವ ಸಮಾಜದ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಮಕ್ಕಂದೂರು ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ತಂಬುಕುತ್ತೀರ ಮಧು ಮಂದಣ್ಣ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕ್ಷುಲಕ ಕಾರಣಕ್ಕೆ ಜನಪ್ರತಿನಿಧಿಯೊಬ್ಬರನ್ನು ಹಾಡಹಗಲೇ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿರುವುದು ಅಪರಾಧವಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಯಾಗುವಂತೆ ನೋಡಿಕೊಳ್ಳಬೇಕು. ಆ ಮೂಲಕ ಅಪ್ಪಣ್ಣ ಅವರಿಗೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಮೂಲನಿವಾಸಿಗಳು ಒಗ್ಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.