ಕುಶಾಲನಗರ, ಜು. ೧೦: ಪೋಷಕರು ಮಕ್ಕಳಿಗೆ ಮೌಲ್ಯಯುತ ಸಂಸ್ಕಾರವನ್ನು ಕಲಿಸಿಕೊಡಬೇಕಾಗಿದೆ ಎಂದು ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಅವರು ಕರೆ ನೀಡಿದ್ದಾರೆ.

ಅವರು ಕುಶಾಲನಗರ ತಾಲೂಕು ಅಕ್ಕನ ಬಳಗ ಆಶ್ರಯದಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಅನಾವಶ್ಯಕ ಸಮಯ ವ್ಯರ್ಥ ಮಾಡಬಾರದು. ಪೋಷಕರು ಅನ್ನ, ಆಶ್ರಯ ನೀಡುವ ನಡುವೆ ಮಕ್ಕಳ ಶಿಕ್ಷಣದೊಂದಿಗೆ ಗುಣ ಸ್ವಭಾವ ನಡಾವಳಿಕೆಗಳ ಬಗ್ಗೆ ಎಚ್ಚರಿಕೆಯಿಂದ ಗಮನಿಸಬೇಕು. ಶಿಸ್ತು ಜವಾಬ್ದಾರಿ ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಿರಿ ಕೊಡ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಕುಶಾಲನಗರ ತಾಲೂಕು ಅಕ್ಕನ ಬಳಗ ಅಧ್ಯಕ್ಷರಾದ ಕಮಲ ಉದಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡ್ಲೂರು ಬೆಸೂರು ಶಿಕ್ಷಕಿ ಸ್ನೇಹ ಬಸಮ್ಮ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗಣ್ಯರು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷರಾದ ಹೆಚ್ ವಿ ಶಿವಪ್ಪ ಪ್ರಧಾನ ಕಾರ್ಯದರ್ಶಿಗಳಾದ ಶಾಂಭ ಶಿವಮೂರ್ತಿ, ಉದಯಕುಮಾರ್, ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಪಾಲಾಕ್ಷ, ಪ್ರಿಯಾಂಕ ಗಂಗಾಧರಪ್ಪ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಬಳಗದ ಕಾರ್ಯದರ್ಶಿ ಮಣಿಯಮ್ಮ, ಖಜಾಂಚಿ ನೇತ್ರಾವತಿ ಮತ್ತು ಬಳಗದ ನಿರ್ದೇಶಕರುಗಳು ಇದ್ದರು.