ಮಡಿಕೇರಿ, ಜು. ೯: ವಕೀಲೆಯೊಬ್ಬರ ಮೇಲೆ ಕೊಲೆ ಬೆದರಿಕೆಯೊಡ್ಡಿ ಮಾನಭಂಗಕ್ಕೆ ಯತ್ನಿಸಿದ ಆರೋಪದಂತೆ ನಗರದ ಐ.ಟಿ.ಐ. ಸನಿಹದ ನಿವಾಸಿ ಪಿ.ಆರ್. ಸುಬ್ರಹ್ಮಣ್ಯ ಎಂಬವರ ವಿರುದ್ಧ ದೂರು ದಾಖಲಾಗಿದೆ. ಮಡಿಕೇರಿಯ ನ್ಯಾಯಾಲಯದಲ್ಲಿ ವಕೀಲರಾಗಿರುವ ಕೆ.ಎಸ್. ಚಂದ್ರಲತಾ ಅವರಿಗೆ ಎಫ್.ಎಂ.ಸಿ. ಕಾಲೇಜಿನ ಬಳಿ ಸರ್ವೆ ನಂ.೬೩/೧ರಲ್ಲಿ ೨.೭೭ ಎಕರೆ ಜಾಗವಿದ್ದು, ಇದನ್ನು ಸನಿಹದ ನಿವಾಸಿಯಾಗಿರುವ ಸುಬ್ರಮಣ್ಯ ಒತ್ತುವರಿ ಮಾಡಲು ಯತ್ನಿಸಿದ್ದಾರೆ. ಓಡಾಡುವ ರಸ್ತೆಗೆ ಎಂ ಸ್ಯಾಂಡ್ ಸುರಿದಿದ್ದು, ಇದನ್ನು ಪ್ರಶ್ನಿಸಿದಾಗ, ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿ ಅವಾಚ್ಯ ಪದಗಳಿಂದ ನಿಂದಿಸಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಚಂದ್ರಲತಾ ಆರೋಪಿಸಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.