ವಿಶೇಷ ವರದಿ : ಚಂದ್ರಮೋಹನ್
ಕುಶಾಲನಗರ, ಜು. ೯: ಐದು ದಶಕಗಳತ್ತ ಸಾಗುವ ಕೊಡಗು ಜಿಲ್ಲೆಯ ಬೃಹತ್ ಜಲಾಶಯವಾದ ಹಾರಂಗಿ ಅಣೆಕಟ್ಟು ಯೋಜನಾ ವ್ಯಾಪ್ತಿಗೆ ಸೇರಿದ ನೂರಾರು ಸಂಖ್ಯೆಯ ಕಟ್ಟಡಗಳು, ವಸತಿಗೃಹಗಳು ಕೆಲವು ವರ್ಷಗಳಿಂದ ಅಕ್ರಮವಾಗಿ ಪರಭಾರೆ ಆಗುವುದರ ಜೊತೆಗೆ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಈ ಮೂಲಕ ಸರಕಾರಕ್ಕೆ ಲಕ್ಷಗಟ್ಟಲೆ ಆದಾಯ ಪೋಲಾಗುತ್ತಿದೆ.
ಇನ್ನೊಂದೆಡೆ ಯೋಜನೆಯ ಸಂಬAಧಪಟ್ಟ ವಸತಿಗೃಹಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಭಾರೆಯಾಗಿ ಸರ್ಕಾರಕ್ಕೆ ವಂಚನೆಯಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇನ್ನು ಕೆಲವು ವಸತಿಗೃಹಗಳು ಪಾಳು ಬಿದ್ದಿವೆ. ಕೆಲವೊಂದು ಕಾಡು ಸೇರಿವೆ. ಒಟ್ಟಾರೆ ಸರಕಾರದ ಕೋಟ್ಯಂತರ ಬೆಲೆಬಾಳುವ ಜಾಗದಲ್ಲಿರುವ ಈ ವಸತಿಗೃಹಗಳ ನಿರ್ವಹಣೆ ಹಾಗೂ ಸರಕಾರಿ ಆಸ್ತಿಯನ್ನು ಉಳಿಸುವ ಕೆಲಸ ತಕ್ಷಣ ಆಗಬೇಕಿದೆ.
ದಾಖಲೆ ಪ್ರಕಾರ ಕುಶಾಲನಗರದಲ್ಲಿ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರ ವಸತಿಗೃಹ ಸೇರಿದಂತೆ ಒಟ್ಟು ೧೧೪ ವಸತಿಗೃಹಗಳು ಇವೆ. ಅಣೆಕಟ್ಟು ವಿಭಾಗ ಮತ್ತು ನೀರಾವರಿ ನಿಗಮದ ಕೆಲ ಅಧಿಕಾರಿ ಸಿಬ್ಬಂದಿಗಳು ಬಾಡಿಗೆ ಅಥವಾ ಸ್ವಂತ ಮನೆಯಲ್ಲಿ ವಾಸವಿದ್ದರೆ ಬಹುತೇಕ ಜನ ವಸತಿಗೃಹಗಳನ್ನು ಪರಭಾರೆಯಾಗಿ ನೀಡಿರುವ ದೂರುಗಳು ಕೇಳಿ ಬಂದಿವೆ. ಇಷ್ಟೆಲ್ಲ ಹೊರತಾಗಿ ಕುಶಾಲನಗರದಲ್ಲಿ ೧೨ ವಸತಿಗೃಹಗಳು ಖಾಲಿ ಬಿದ್ದು, ಪಾಳುಬೀಳುವ ಹಂತದಲ್ಲಿದೆ. ಕುಶಾಲನಗರ ಮೈಸೂರು ರಸ್ತೆಯ ಕೋರ್ಟ್ ಮುಂಭಾಗದಲ್ಲಿ ಕೂಡ ಹತ್ತು ವಸತಿಗೃಹಗಳು ಇದೆ.
ಹಾರಂಗಿ ಅಣೆಕಟ್ಟು ಎದುರು ಭಾಗದಲ್ಲಿ ಒಟ್ಟು ೧೪೫ ಕಟ್ಟಡಗಳಲ್ಲಿ ಕಚೇರಿ ಮತ್ತು ವಸತಿಗೃಹಗಳಿದ್ದು ಬಹುತೇಕ ಕಚೇರಿಗಳು ವಸತಿಗೃಹಗಳು ಅಂದಾಜು ೬೫ ರಷ್ಟು ಖಾಲಿ ಬಿದ್ದಿವೆ. ಉಳಿದ ಕಟ್ಟಡಗಳು ಬಳಕೆಯಾಗುತ್ತಿವೆ ಎನ್ನುವ ಮಾಹಿತಿ ಲಭ್ಯವಿದೆ. ಕೆಲವು ಕಟ್ಟಡಗಳಲ್ಲಿ ದಿನಗೂಲಿ ನೌಕರರ ಕುಟುಂಬ ವಾಸ ಮಾಡುತ್ತಿದೆ.
ಐದು ದಶಕಗಳ ಹಿಂದೆ ಸಾರ್ವಜನಿಕ ಉಪಯೋಗ ಎಂದು ನಿರ್ಮಾಣವಾದ ಹಲವು ಕಟ್ಟಡಗಳು ಇಂದು ಪೊದೆಸೇರಿ ಪಾಳು ಬಿದ್ದಿರುವುದು ನಿಜವಾಗಿಯೂ ಆತಂಕಕಾರಿ ಬೆಳವಣಿಗೆಯಾಗಿದೆ. ಅಂದಿನ ಕಾಲದಲ್ಲಿ ಶಾಲೆಗೆ ತೆರಳಲು ಬಳಸುತ್ತಿದ್ದ ಅಣೆಕಟ್ಟು ವಿಭಾಗದ ಬಸ್ಸೊಂದು ಕಳೆದ ಹಲವು ವರ್ಷಗಳಿಂದ ಮಳೆ ಗಾಳಿಗೆ ಮೈಯೊಡ್ಡಿ ನಿಂತ ದೃಶ್ಯ ಗೋಚರಿಸಿದೆ.
ಹಾರಂಗಿ ಅಣೆಕಟ್ಟು ನಿರ್ಮಾಣ ನಂತರ ನಿರ್ವಹಣೆ ಹಿನ್ನೆಲೆಯಲ್ಲಿ ಹಲವು ವಿಭಾಗಗಳು, ಉಪ ವಿಭಾಗಗಳ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಹಲವು ವಿಭಾಗ ಉಪವಿಭಾಗಗಳು ಸ್ಥಳಾಂತರಗೊAಡ ನಂತರ ಈಗ ಕೇವಲ ಒಂದು ವಿಭಾಗ ಮಾತ್ರ ಕಾರ್ಯನಿರ್ವಹಿಸ್ತಿದ್ದು, ಅದರ ಕೇಂದ್ರ ಕಚೇರಿ ಕುಶಾಲನಗರದಲ್ಲಿ ಕೆಲಸ ನಿರ್ವಹಿಸುವುದನ್ನು ಕಾಣಬಹುದು. ವಾಸ್ತವವಾಗಿ ಅಣೆಕಟ್ಟು ಇರುವ ಪ್ರದೇಶದ ಸನಿಹದಲ್ಲಿ ಕಚೇರಿಗಳು ವಸತಿಗೃಹಗಳು ಇರಬೇಕಾದ ನಿಯಮಗಳಿದ್ದರೂ ಸುಮಾರು ೬ ಕಿ.ಮೀ ದೂರದಲ್ಲಿ ಇರುವ ಕುಶಾಲನಗರ ಪಟ್ಟಣದಲ್ಲಿರುವ ಕಟ್ಟಡಗಳಲ್ಲಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.
ಈ ಬಗ್ಗೆ ಹಿಂದಿನ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಕಚೇರಿಗಳನ್ನು ಹಾರಂಗಿ ಅಣೆಕಟ್ಟು ಸಮೀಪಕ್ಕೆ ಸ್ಥಳಾಂತರಿಸಬೇಕು ಎನ್ನುವ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆದರೆ ಅದು ಇನ್ನೂ ಕಾರ್ಯಗತವಾಗಿಲ್ಲ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವಸತಿಗೃಹಗಳ ಪರಭಾರೆ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಶೇಷ ಅಂದರೆ ಕುಶಾಲನಗರದಲ್ಲಿ ಇರುವ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರ ವಸತಿಗೃಹಕ್ಕೆ ವಾರ್ಷಿಕ ಲಕ್ಷಾಂತರ ರೂಪಾಯಿ ನಿರ್ವಹಣೆ ವೆಚ್ಚವಾಗುತ್ತಿದ್ದರೂ, ವಾಸವಿಲ್ಲದೆ ವಸತಿಗೃಹ ಖಾಲಿ ಬಿದ್ದಿರೋದು ಕಂಡುಬAದಿದೆ. ವಿದ್ಯುತ್ ಬಿಲ್ ಸೇರಿದಂತೆ ನಿರ್ವಹಣೆ ವೆಚ್ಚ ನಿರಂತರವಾಗಿ ಭರಿಸಬೇಕಾದ ಪ್ರಮೇಯ ಇದ್ದೇ ಇದೆ. ಕೆಲವು ವಸತಿಗೃಹಗಳಲ್ಲಿ ಬೇರೆ ಕುಟುಂಬಗಳು ವಾಸವಾಗುತ್ತಿರುವ ಬಗ್ಗೆ ಕೂಡ ಹಲವು ದೂರುಗಳು ಕೇಳಿ ಬಂದಿವೆ. ಕೆಲವು ಸಿಬ್ಬಂದಿಗಳು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಕ್ರಮವಾಗಿ ಬಳಕೆ ಮಾಡುವವರಿಂದ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಇದೇ ರೀತಿ ಚಿಕ್ಲಿಹೊಳೆ ಅಣೆಕಟ್ಟು ಸಂಬAಧಿಸಿದ ವಸತಿಗೃಹಗಳು ಕೂಡ ಸಂಬAಧಿಸಿದ ಸಿಬ್ಬಂದಿಗಳಿಲ್ಲದೆ ಪರಭಾರೆಯಾಗಿರುವ ಬಗ್ಗೆ ಕೂಡ ಆರೋಪಗಳು ಕೇಳಿ ಬರುತ್ತಿವೆ.
ಈ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಾರಂಗಿ ಅಣೆಕಟ್ಟು ವ್ಯಾಪ್ತಿಗೆ ಸೇರಿದ ವಸತಿಗೃಹಗಳ ನಿರ್ವಹಣೆ ಜೊತೆಗೆ ವಾಸವಿರುವ ಕುಟುಂಬಗಳ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ಪಡೆಯಬೇಕಾಗಿದೆ ಎಂದು ಕುಶಾಲನಗರ ಪುರಸಭೆ ಸದಸ್ಯರಾದ ಶೈಲ ಕೃಷ್ಣಪ್ಪ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.