ವೀರಾಜಪೇಟೆ, ಜು. ೯: ಇಂದಿನ ವೈಜ್ಞಾನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಭವಿಷ್ಯದಲ್ಲಿ ನಾಯಕತ್ವ ಹಾಗೂ ಪ್ರತಿಭೆಯ ಕ್ರಿಯಾಶೀಲತೆಯನ್ನು ಬಿಂಬಿಸಿಕೊಳ್ಳಬಹುದಾಗಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಕೊಡವ ಸಮಾಜದ ಜಿಮ್ಮಿ ಕಲಾ ವೇದಿಕೆಯಲ್ಲಿ ತ್ರಿವೇಣಿ ಶಾಲೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ೨೦೨೩-೨೪ ರ ಸಮಾರಂಭ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲೆ ನಾಯಕತ್ವ ಗುಣ ಆರಂಭವಾಗುತ್ತದೆ. ಕೆಲವರು ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಇನ್ನು ಕೆಲವರು ಇದಕ್ಕೆ ಹಿಂದೇಟು ಹಾಕುತ್ತಾರೆ. ನಾಯಕತ್ವ ಗುಣ ಬೆಳೆಸಿಕೊಂಡರೆ ಮುಂದೆ ರಾಜ್ಯ ರಾಷ್ಟçಮಟ್ಟದಲ್ಲಿ ಉತ್ತಮ ನಾಯಕನಾಗಿ ಹೊರಹೊಮ್ಮ ಬಹುದಾಗಿದೆ. ಆದ್ದರಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ತಂದು ಸಾಧನೆ ಮಾಡುವ ಸಂಕಲ್ಪ ಮಾಡಿ. ಉತ್ತಮ ಅಂಕಗಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಇಡಬೇಕು. ಹತ್ತನೇ ತರಗತಿ ವಿದ್ಯಾರ್ಥಿಗಳ ಮೇಲೆ ತಮ್ಮ ಪೋಷಕರ ನಿರೀಕ್ಷೆ ಸಾಕಷ್ಟು ಇದ್ದು ಅದಕ್ಕೆ ಬೆಲೆ ನೀಡಿ ಅವರ ಕನಸುಗಳನ್ನು ನನಸು ಗೊಳಿಸಲು ಶ್ರಮ ವಹಿಸಬೇಕು. ಈ ಶಾಲೆಯನ್ನು ಅಭಿವೃದ್ಧಿಗೊಳಿಸಿ ಇನ್ನಷ್ಟು ಮಾದರಿ ಶಾಲೆಯಾಗಿ ರೂಪಿಸುವುದೇ ಕೊಡವ ಸಮಾಜದ ನೂರು ವರ್ಷ ಆಚರಣೆಯ ಮುಖ್ಯ ಗುರಿ ಎಂದು ಹೇಳಿದರು.

ಸಮಾರಂಭವನ್ನು ಉದ್ದೇಶಿಸಿ ತ್ರಿವೇಣಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಅಮ್ಮಣಿಚಂಡ ಗಂಗಮ್ಮ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿವೇಣಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿ ಸಂಘದ ಪದಾಧಿ ಕಾರಿಗಳಿಗೆ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕೊಣೇರಿರ ಕಾವೇರಮ್ಮ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪ್ರತಿಮ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಮಾರಂಭ ದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಕಳೆದ ಸಾಲಿನಲ್ಲಿ ಹತ್ತನೇ ತರಗತಿ ಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ದತ್ತಿ ನಿಧಿಯನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ವೀರಾಜಪೇಟೆ ಕೊಡವ ಸಮಾಜ ಆಡಳಿತ ಮಂಡಳಿ ಸದಸ್ಯ ಚೆಮೀರ ಅರ್ಜುನ, ತ್ರಿವೇಣಿ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಕಾಣತಂಡ ಧನು ಮಾಳೇಟಿರ ಸ್ವಾತಿ ಕುಶಾಲಪ್ಪ ಕುಡ್ರಂಡ ಶಿಲ್ಪ ಪೊನ್ನಪ್ಪ ಉಪಸ್ಥಿತರಿದ್ದರು.