ಕೊಡ್ಲಿಪೇಟೆ, ಜು. ೯: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ನಿವಾಸಿ ಯೋರ್ವರಿಗೆ ತಮ್ಮ ಜೀವ ಉಳಿಸಿಕೊಳ್ಳಲು ಕಿಡ್ನಿ ಬದಲಾವಣೆ ಅನಿವಾರ್ಯವಾಗಿದ್ದು, ಇದಕ್ಕಾಗಿ ಸಾರ್ವಜನಿಕ ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ನಿಲುವಾಗಿಲು ಗ್ರಾಮದ ಎನ್.ಜಿ. ಯೋಗೇಶ್ (೩೮) ಅವರು ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ನೆರವಿಗೆ ಮೊರೆಯಿಟ್ಟಿದ್ದು, ಇವರ ಜೀವ ಉಳಿಯಬೇಕಾದರೆ ದೇಹದ ಎರಡೂ ಕಿಡ್ನಿಗಳ ಬದಲಾವಣೆ ಅನಿವಾರ್ಯವಾಗಿದೆ.

ಬಡ ಕುಟುಂಬದ ಯೋಗೇಶ್ ಅವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು ನಂತರದ ದಿನಗಳಲ್ಲಿ ಆರೋಗ್ಯ ತೀರಾ ಹದಗೆಟ್ಟಿತು. ಇದಾಗಿ ಕೆಲ ಸಮಯದಲ್ಲೇ ಎರಡೂ ಕಿಡ್ನಿಗಳು ವಿಫಲಗೊಂಡಿದ್ದು, ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ತಾಯಿ, ಪತ್ನಿ ಹಾಗೂ ಪುಟ್ಟ ಮಗುವಿನ ಕುಟುಂಬ ನಿರ್ವಹಣೆಯೂ ಕಷ್ಟಸಾಧ್ಯವಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ಯೋಗೇಶ್ ಅವರು ಅನಾರೋಗ್ಯಕ್ಕೀಡಾಗಿದ್ದು, ಕುಟುಂಬದ ಸಂಕಷ್ಟವೂ ಹೇಳತೀರದ್ದಾಗಿದೆ.

ಯೋಗೇಶ್ ಅವರು ಮೊದಲಿನಂತಾಗಲು ಎರಡು ಕಿಡ್ನಿಗಳ ಬದಲಾವಣೆ ಅಗತ್ಯವಿದೆ. ಮಗನ ಕಷ್ಟಕ್ಕೆ ಮರುಗಿದ ತಾಯಿ ತನ್ನ ಒಂದು ಕಿಡ್ನಿಯನ್ನು ನೀಡಲು ಮುಂದೆ ಬಂದಿದ್ದಾರೆ. ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಕಿಡ್ನಿ ಬದಲಾವಣೆಯ ಶಸ್ತçಚಿಕಿತ್ಸೆ ನಡೆಯಲಿದೆ. ಈ ಶಸ್ತç ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವ್ಯಯವಾಗಲಿದ್ದು, ಬಡ ಕುಟುಂಬಕ್ಕೆ ಆರ್ಥಿಕ ಶಕ್ತಿ ಇಲ್ಲವಾಗಿದೆ. ಈ ಹಿನ್ನೆಲೆ ಸಹೃದಯಿ ಸಾರ್ವಜನಿಕ ದಾನಿಗಳಿಂದ ಕುಟುಂಬ ನೆರವು ಕೋರಿದೆ.

ಬಡ ಕುಟುಂಬಕ್ಕೆ ನೆರವು ನೀಡುವ ಸಹೃದಯ ದಾನಿಗಳು ಕೊಡ್ಲಿಪೇಟೆ ಕೆನರಾ ಬ್ಯಾಂಕ್‌ನಲ್ಲಿರುವ ಯೋಗೇಶ್ ಎನ್.ಜಿ., ಖಾತೆ ಸಂಖ್ಯೆ: ೧೭೫೭೧೦೧೦೧೨೮೨೧, ಐಎಫ್‌ಎಸ್‌ಸಿ: ಸಿ.ಎನ್.ಆರ್.ಬಿ. ೦೦೦೧೭೫೭ ಇಲ್ಲಿಗೆ ನೆರವು ನೀಡಬಹುದು. ಮಾಹಿತಿಗಾಗಿ ಮೊ. ೮೧೪೭೦೫೯೨೨೪ ಸಂಖ್ಯೆಯನ್ನು ಸಂಪರ್ಕಿಸಬಹುದು.