ವೀರಾಜಪೇಟೆ, ಜು. ೧೦: ಮುಂಗಾರು ಈ ಬಾರಿ ತಡವಾಗಿ ಆರಂಭವಾದ ಹಿನ್ನೆಲೆ ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆಯಾಗಿದೆ. ಮಣ್ಣಿನಲ್ಲಿ ಸಾವಯವ ಇಂಗಾಲವನ್ನು ಹೆಚ್ಚಿಸುವ ಸಲುವಾಗಿ ಹಸಿರೆಲೆ ಗೊಬ್ಬರ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದೆ. ರಸಗೊಬ್ಬರ ಮತ್ತು ಕೀಟ/ರೋಗ ನಾಶಕಗಳು ಸಹಕಾರ ಸಂಘ/ಖಾಸಗಿ ಮಳಿಗೆಗಳಲ್ಲಿ ಲಭ್ಯವಿದ್ದು, ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಹಾಗೂ ರೈತರು ಕಾಂಪ್ಲೆಕ್ಸ್ ಗೊಬ್ಬರಗಳನ್ನು ಖರೀದಿಸುವ ಮುನ್ನ ಕೃಷಿ ಇಲಾಖೆಯಲ್ಲಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ ಎಂದು ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.

ಮುಂಗಾರು ಸಮಯಕ್ಕೆ ಸರಿಯಾಗಿ ಬಾರದೆ, ತಡವಾಗಿ ಪ್ರಾರಂಭವಾಗಿರುವುದರಿAದ ರೈತರಿಗೆ ಕಡಿಮೆ ಕಾಲಾವಧಿಯ, ಅಂದರೆ ೧೨೦ ರಿಂದ ೧೩೫ ದಿನಗಳಲ್ಲಿ ಕಟಾವಿಗೆ ಬರುವಂತಹ, ದೃಢೀಕೃತಗೊಂಡ ಅಧಿಕ ಇಳುವರಿ ನೀಡುವ ತಳಿಗಳನ್ನು ಮತ್ತು ಹೈಬ್ರೀಡ್ ಭತ್ತದ ತಳಿಗಳನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ಭತ್ತದ ತಳಿಗಳಾದ ಅತೀರಾ, ತನು, ಇಂಟಾನ್, ಆರ್.ಎನ್.ಆರ್-೧೫೦೪೮, ತುಂಗಾ-೧೩೯೦೧, ಬಿ.ಆರ್-೨೬೫೫, ಉಮಾ ಹಾಗೂ ಹೈಬ್ರೀಡ್ ತಳಿಗಳಾದ ಪಿ.ಎ.ಸಿ-೮೩೭, ಮೈಕೋ-೫೪೦೮ ಬಿತ್ತನೆ ಬೀಜವನ್ನು ದಾಸ್ತಾನು ಇರಿಸಿ ರೈತರಿಗೆ ಈಗಾಗಲೇ ೮೦೫.೪ ಕ್ವಿಂಟಾಲ್ ಅಧಿಕ ಇಳುವರಿ ತಳಿಗಳು ಮತ್ತು ೦.೩೬ ಕ್ವಿಂಟಾಲ್ ಹೈಬ್ರೀಡ್ ಭತ್ತದ ತಳಿಗಳನ್ನು ರೈತರಿಗೆ ವಿತರಣೆ ಮಾಡಲಾಗಿರುತ್ತದೆ. ಅಲ್ಲದೆ ರೈತರ ಬೇಡಿಕೆಯನ್ವಯ ತಳಿಗಳನ್ನು ತರಿಸಿ ವಿತರಣೆ ಮಾಡಲಾಗುವುದು.

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ರೈತರು ವರ್ಷಕ್ಕೆ ೧೨೦೦೦/-ಪ್ರೋತ್ಸಾಹ ಧನವನ್ನು ಪಡೆಯಲು ನೋಂದಣಿಯಾದ ರೈತರು ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ. ಅದರಂತೆ ಈಗಾಗಲೇ ಶೇ. ೯೦ರಷ್ಟು ಇ-ಕೆ.ವೈ.ಸಿ ನೋಂದಣಿ ಕಾರ್ಯ ಪೂರ್ಣಗೊಂಡಿದ್ದು, ೭೪೦ ರೈತರು ಇ.ಕೆ.ವೈ.ಸಿ ಮಾಡಿಸಲು ಬಾಕಿ ಇರುತ್ತದೆ. ಆದುದರಿಂದ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ-೧ ಕೇಂದ್ರಗಳನ್ನು ಸಂಪರ್ಕಿಸುವುದು.

ಬೆಳೆ ಸಮೀಕ್ಷೆ ಯೋಜನೆಯಡಿ ಮುಂಬರುವ ದಿನಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವ ಸಲುವಾಗಿ ರೈತರೇ ನೇರವಾಗಿ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ತಮ್ಮ ಬೆಳೆಯ ಸಮೀಕ್ಷೆ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.