ಕುಶಾಲನಗರ, ಜು.೯ : ಕ್ಷೇತ್ರದ ಜನತೆ ಮಧ್ಯವರ್ತಿಗಳನ್ನು ಅವ ಲಂಬಿಸದೆ ತಮ್ಮ ಅಹವಾಲುಗಳನ್ನು ನೇರವಾಗಿ ತನ್ನ ಜೊತೆ ಹೇಳಿ ಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಮಂಥರ್‌ಗೌಡ ತಿಳಿಸಿದ್ದಾರೆ.

ಕುಶಾಲನಗರದ ಇಂದಿರಾ ಬಡಾವಣೆಯ ದಾರುಲ್ ಉಲುಂ ಮದರಸದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದರು. ಮತದಾರರು ಕಾರ್ಯಕರ್ತರ ಆಶಯ ಈಡೇರಿಸುವ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಸದ್ಯದಲ್ಲಿಯೇ ಶಾಸಕರ ಕಚೇರಿ ತೆರೆಯುವುದಾಗಿ ಮಾಹಿತಿ ನೀಡಿದರು.

ಕುಶಾಲನಗರ ಪಟ್ಟಣ ಪಂಚಾ ಯಿತಿ ಸದಸ್ಯರಾದ ಶೇಕ್ ಕಲೀಮುಲ್ಲಾ ಮತ್ತು ಅಭಿಮಾನಿಗಳ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭ ದಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಈ ಬಾರಿ ಎಲ್ಲರ ಸಹಕಾರದಿಂದ ಕೊಡಗಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು. ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, ನೂತನ ಶಾಸಕರು ಎಲ್ಲರನ್ನೂ ಜಾತ್ಯಾತೀತವಾಗಿ, ಸಮಾನವಾಗಿ ಕರೆದೊಯ್ಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಎಲ್ಲಾ ನಾಯಕರ ಒಮ್ಮತದ ಕಾರಣ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಶಾಸಕರ ಗೆಲುವಿನಲ್ಲಿ ಪ್ರತಿಯೊಬ್ಬ ಮುಖಂಡರ ಪಾತ್ರ ಮಹತ್ವದ್ದಾಗಿದೆ ಎಂದರು. ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಮುಂದಿನ ದಿನಗಳಲ್ಲಿ ಕೊಡಗನ್ನು ಸಂಪೂರ್ಣ ಕಾಂಗ್ರೆಸ್ ಮಯ ವಾಗಿಸುವ ನಿಟ್ಟಿನಲ್ಲಿ ಪಣ ತೊಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಖ್ ಖಲೀಮುಲ್ಲಾ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತಾಗಿ ಕೊಡಗನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶಾಸಕರು ಕ್ರಮವಹಿಸಬೇಕಿದೆ ಎಂದರು. ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಧರ್ಮಗುರುಗಳಾದ ತಮ್ಲಿಖ್ ಧಾರಿಮಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಉಪಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಕಾಂತರಾಜು, ಮುಖಂಡರಾದ ಟಿ.ಪಿ.ಹಮೀದ್, ಯಾಕೂಬ್, ಅಬ್ದುಲ್ ಲತೀಫ್, ಕಾರ್ಯಕ್ರಮ ಸಂಘಟಕರಾದ ಶಿವಶಂಕರ್, ಕಿರಣ್, ಆದಂ, ಚಿರು ಸೇರಿದಂತೆ ಪುರಸಭೆ ಸದಸ್ಯರುಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.