ಸೋಮವಾರಪೇಟೆ: ಮಡಿಕೇರಿ ವನ್ಯಜೀವಿ ವಿಭಾಗದ ಪುಷ್ಪಗಿರಿ ವನ್ಯಜೀವಿ ವಲಯದ ವತಿಯಿಂದ ಶಾಂತಳ್ಳಿ-ಬೆಟ್ಟದಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಕೆ. ಗೋಪಾಲ ಅವರು ಮಾತನಾಡಿ, ಮಕ್ಕಳು ಪರಿಸರ ಸ್ನೇಹಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕಾಡಿಗೆ ಬೆಂಕಿ ಹಚ್ಚಿ ಕಾಡನ್ನು ನಾಶ ಮಾಡುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಮಕ್ಕಳಿಗೆ ಪರಿಸರ ಮಾಲಿನ್ಯದಿಂದ ಆಗುವ ದುಷ್ಪರಿಣಾಮ ಹಾಗೂ ಪರಿಸರ ಮಾಲಿನ್ಯಕ್ಕೆ ನಾವು ಹೇಗೆ ಕಾರಣಕರ್ತರಾಗುತ್ತೇವೆ ಎಂದು ವಿವರಿಸಿದರಲ್ಲದೆ, ಭೂಮಿಯ ನೆಲ ಜಲ ವನ್ಯಜೀವಿ ನದಿ ತೊರೆಗಳು ಮರಗಿಡಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಎಂದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನೆಟ್ಟ ಗಿಡಗಳ ರಕ್ಷಣೆ ಮತ್ತು ಪೋಷಣೆ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಕುಮಾರಿ, ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕಾರ್ಯಪ್ಪ, ಶಾಲಾ ಶಿಕ್ಷಕರು, ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ, ಅರಣ್ಯ ಪಾಲಕರು ಮತ್ತು ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ಶಾಲೆಗಳ ಆವರಣದಲ್ಲಿ ೫೦ಕ್ಕೂ ಅಧಿಕ ಸಸಿಗಳನ್ನು ಶಾಲಾ ಮಕ್ಕಳು ನೆಟ್ಟರು.
ಮುಳ್ಳೂರು: ಸಮೀಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಶನಿವಾರಸಂತೆ ಅರಣ್ಯ ಇಲಾಖೆ ಮತ್ತು ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವನ ಮಹೋತ್ಸವ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಮತ್ತು ಪರಿಸರ ಮತ್ತು ಅರಣ್ಯದ ಮಹತ್ವ ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವನಮಹೋತ್ಸವ ಪ್ರಯುಕ್ತ ಶಾಲೆಗೆ ಸೇರಿದ ಜಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಶಾಲಾ ವಿದ್ಯಾರ್ಥಿಗಳು ಅರಣ್ಯ ಇಲಾಖೆ ವಿತರಣೆ ಮಾಡಿದ ವಿವಿಧ ಉಪಯುಕ್ತ ಗಿಡಗಳನ್ನು ನೆಟ್ಟರು. ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅರಣ್ಯ ಉಪ ವಲಯಾಧಿಕಾರಿ ಸೂರ್ಯ-ವಿದ್ಯಾರ್ಥಿಗಳು ಅರಣ್ಯ ಮತ್ತು ಪರಿಸರದ ಮಹತ್ವದ ಬಗ್ಗೆ ಅರಿವು ಹೊಂದಿರಬೇಕು. ತಮ್ಮ ಮನೆಯ ಜಾಗದಲ್ಲಿ ಮರಗಿಡಗಳನ್ನು ಬೆಳೆಸಿ ಪೋಷಿಸಬೇಕು ತಮ್ಮ ಪೋಷಕರು ಸೇರಿದಂತೆ ಅಕ್ಕಪಕ್ಕದವರಿಗೆ ಪರಿಸರ ಮತ್ತು ಅರಣ್ಯ ಸಮೃದ್ದಿ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು. ಅರಣ್ಯ ಇಲಾಖೆ ಅರಣ್ಯ, ವನ್ಯಜೀವಿ ಮತ್ತು ಪರಸರದ ಉಳಿವಿಗೋಸ್ಕರವಾಗಿ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಮರಗಳನ್ನು ಬೆಳೆಸುವ ಸಲುವಾಗಿ ವನಮಹೋತ್ಸವ ಕಾರ್ಯಕ್ರಮದ ಮೂಲಕ ಗಿಡಗಳನ್ನು ವಿತರಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ನೆಟ್ಟಿರುವ ಗಿಡಗಳನ್ನು ಪೋಷಿಸಿ ಸಮೃದ್ಧಿಗೊಳಿಸುವಂತೆ ಸಲಹೆ ನೀಡಿದರು.
ವನಮಹೋತ್ಸವ ಕಾರ್ಯಕ್ರಮದಲ್ಲಿ ಅರಣ್ಯ ಹಾಗೂ ಪರಿಸರ ಉಳಿಸುವಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತಾಗಿ ಶಾಲಾ ಶಿಕ್ಷಕಿ ಪೂಜಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಡಿಆರ್ಎಫ್ಓ ಪ್ರಶಾಂತ್, ಅರಣ್ಯ ರಕ್ಷಕರಾದ ಎಸ್.ಎ. ನಾಗರಾಜ್, ರಾಮಕೃಷ್ಣ ಶೆಟ್ಟಿ, ವಿದ್ಯಾಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಕೆ. ಶಿವಪ್ರಕಾಶ್, ಶಾಲಾ ಮುಖ್ಯ ಶಿಕ್ಷಕಿ ಸರಿತಾ, ಶಿಕ್ಷಕಿ ಜಯಂತಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.