ಕುಶಾಲನಗರ, ಜು. ೮: ಕುಶಾಲನಗರದಲ್ಲಿ ಮುಸುಕುಧಾರಿಗಳಾಗಿ ಚಿನ್ನದ ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರಜಿಲ್ಲಾ ಖದೀಮ ಮಹಿಳೆಯರನ್ನು ಕುಶಾಲನಗರ ಪೊಲೀಸರು ಚಿತ್ರದುರ್ಗದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಚಿತ್ರದುರ್ಗದ ಕೈರೋನ್ ಮತ್ತು ಜೈರೋನ್ ಬಂಧಿತ ಆರೋಪಿಗಳು. ಕಳೆದ ಕೆಲವು ದಿನಗಳ ಹಿಂದೆ ಕುಶಾಲನಗರದ ಮಡಿಕೇರಿ ರಸ್ತೆಯ ಮತ್ತು ರಥ ಬೀದಿಯ ಚಿನ್ನಾಭರಣಗಳ ಮಳಿಗೆಗೆ ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ನುಗ್ಗಿ ನಕಲಿ ಆಭರಣಗಳನ್ನು ಇಟ್ಟು ಲಕ್ಷಾಂತರ ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ದೋಚಿದ್ದ ಇಬ್ಬರು ಮಹಿಳೆಯರನ್ನು ಕುಶಾಲನಗರ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಕುಶಾಲನಗರದ ಐಬಿ ರಸ್ತೆ ಪಕ್ಕದಲ್ಲಿರುವ ಚಿನ್ನಾಭರಣ ಮಳಿಗೆಯಿಂದ ಸುಮಾರು ೪೫ ಗ್ರಾಂ ಅಪಹರಿಸಿ ಮಹಿಳೆಯರ ತಂಡ ವಂಚಿಸಿದ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಇದೇ ರೀತಿಯ ಪ್ರಕರಣ ರಥ ಬೀದಿಯ ಚಿನ್ನಾಭರಣ ಅಂಗಡಿಯಲ್ಲಿ ಕೂಡ ನಡೆದಿತ್ತು. ಈ ಬಗ್ಗೆ ವಿವಿಧ ಕಡೆ ಆರೋಪಿಗಳು ಸಂಚರಿಸುತ್ತಿದ್ದ ವಾಹನಗಳ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಕೊಡಗು ಜಿಲ್ಲಾ ಎಸ್ಪಿ ರಾಮರಾಜನ್ ಮತ್ತು ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳ ತಂಡ ಚಿತ್ರದುರ್ಗದಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿದೆ.
ಇಬ್ಬರು ಮಹಿಳಾ ಆರೋಪಿಗಳನ್ನು ವಶಪಡಿಸಿ ವಿಚಾರಣೆಗೊಳಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ರಥ ಬೀದಿಯ ಪ್ರಕರಣಕ್ಕೆ ಸಂಬAಧಿಸಿದAತೆ ನಾಪತ್ತೆಯಾಗಿರುವ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.