ನಾಪೋಕ್ಲು, ಜು. ೭: ಕೇರಳದ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀರಾಜಪೇಟೆಯ ನೆಹರು ನಗರದ ನಿವಾಸಿ ಗಫೂರ್ ಎಂಬಾತ ಸಮೀಪದ ಹಳೆ ತಾಲೂಕಿನ ಗ್ಯಾರೇಜ್ ಒಂದರ ಮುಂಭಾಗದಲ್ಲಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಶ್ರೇಣಿಯ ರೂ. ೧,೫೨೦ ಮೌಲ್ಯದ ೩೮ ಕೇರಳ ರಾಜ್ಯದ ಲಾಟರಿ ಮತ್ತು ಮಾರಾಟ ಮಾಡಿದ ರೂ. ೨೭೦ ಗಳೊಂದಿಗೆ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕಕ ರಾಮರಾಜನ್, ಹೆಚ್ಚುವರಿ ಪೊಲೀಸ್ ಉಪ ಅಧೀಕ್ಷಕ ಸುಂದರ್‌ರಾಜ್ ನಿರ್ದೇಶನದಂತೆ ಉಪ ವಿಭಾಗದ ಡಿವೈಎಸ್ಪಿ ಜಗದೀಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಇದ್ದರು.