ಚೆಯ್ಯಂಡಾಣೆ, ಜು. ೭ : ಸಮೀಪದ ಕೊಕೇರಿಯಲ್ಲಿ ಕಾಡಾನೆ ಹಾವಳಿ ಮರುಕಳಿಸಿದ್ದು ೯ ಕಾಡಾನೆಗಳ ಹಿಂಡು ಕೋಕೇರಿ ಗ್ರಾಮದ ಮಚ್ಚಂಡ ಸುಮತಿ ಅವರ ತೋಟಗಳಲ್ಲಿ ನಿರಂತರ ದಾಳಿ ನಡೆಸಿ ಗಿಡಗಳನ್ನು ತುಳಿದು ಸರ್ವನಾಶ ಮಾಡಿ, ತೋಟಕ್ಕೆ ತೆರಳುವ ಗೇಟ್‌ಅನ್ನು ತುಳಿದು ನಾಶ ಪಡಿಸಿವೆ.
ಇನ್ನೊಂದು ಕಾಡಾನೆ ಹಿಂಡು ಮರಂದೋಡ ಭಾಗದಲ್ಲಿ ತೋಟಗಳಿಗೆ ಲಗ್ಗೆ ಇಟ್ಟು ಹಾನಿಪಡಿಸುತ್ತಿದ್ದು, ಮುಕ್ಕಾಟಿ ಚಿಣ್ಣಪ್ಪ ಅವರ ಮನೆಯಲ್ಲಿದ್ದ ದೊಡ್ಡ ಗಾತ್ರದ ಹಂಡೆಯನ್ನು ತುಳಿದು ಹಾನಿಪಡಿಸಿದೆ. ಈ ಭಾಗದ ಚೋಯಮಂಡ, ಮೇರಿಯಂಡ, ಮುಕ್ಕಾಟಿ, ಅನ್ನಡಿಯಂಡ, ಮಾರ್ಚಂಡ ಕುಟುಂಬಸ್ಥರ ತೋಟಗಳಿಗೆ ಅಪಾರ ಹಾನಿಯಾಗಿದೆ. ಮತ್ತೊಂದು ಗುಂಪು ಕಾಡಾನೆ ಚೆಯ್ಯಂಡಾಣೆ, ಚೇಲಾವರ ಭಾಗದಲ್ಲಿ ತೋಟಗಳಿಗೆ ಲಗ್ಗೆಇಟ್ಟು ಹಾವಳಿ ಮಾಡುತ್ತಿವೆ.
ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಗಿಡಗಳನ್ನು ತುಳಿದು ಗದ್ದೆರೂಪದಲ್ಲಿ ಮಾರ್ಪಡು ಮಾಡಿವೆ. ಜೀವ ಬಲಿ ಪಡೆಯುವ ಮುನ್ನ ಇಲಾಖೆ ಎಚ್ಚೆತ್ತು ಕೊಳ್ಳಬೇಕು. ಒಟ್ಟು ೨೫ ಕ್ಕೂ ಅಧಿಕ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ದಾಳಿ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೂಡಲೇ ಸರಕಾರ ಹಾಗೂ ಅರಣ್ಯ ಇಲಾಖೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕು, ಕಾಡಾನೆ ಕಾರ್ಯಾಚರಣೆ ನಡೆಸಿ, ಕಾಡಾನೆ ಸೆರೆ ಹಿಡಿಯ ಬೇಕೆಂದು ನೊಂದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಿಬ್ಬಂದಿಯನ್ನೇ ಅಟ್ಟಾಡಿಸಿದ ಪುಂಡಾನೆ
ಕೋಕೇರಿ ಗ್ರಾಮದಲ್ಲಿ ಹಾನಿ ಗೊಳಗಾದ ಸ್ಥಳಕ್ಕೆ ತೆರಳಿದ ಅರಣ್ಯ ಕ್ಯಾಂಪ್ ಸಿಬ್ಬಂದಿಗಳಾದ ಸುರೇಶ್, ಭರತ್, ಅಶ್ವತ್ ಹಾಗೂ ನಾಣಯ್ಯ ಅವರು ತೋಟದಲ್ಲಿ ಹಾನಿಪಡಿಸಿದ ಗಿಡಗಳ ಚಿತ್ರೀಕರಣ ಮಾಡುವ ಸಂದರ್ಭ ತೋಟದಲ್ಲಿದ್ದ ಆನೆ ಏಕಾಏಕಿ ಇವರನ್ನು ಬೆನ್ನಟ್ಟಿದೆ. ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಮುಂದೆ ಓಡಲಾಗಲಿಲ್ಲ. ಅದೃಷ್ಟ ವಶಾತ್ ಆನೆ ಕಿರುಚಿ ಅಲ್ಲಿಂದ ಹಿಂದಕ್ಕೆ ತೆರಳಿದ್ದು, ಪ್ರಾಣಾಪಾಯ ದಿಂದ ಸಿಬ್ಬಂದಿಗಳು ಪಾರಾಗಿದ್ದಾರೆ.
-ಅಶ್ರಫ್