ಮಡಿಕೇರಿ, ಜು. ೮: ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಸದಾನಂದ ಗೌಡ ಅವರು ತಮ್ಮ ಕುಟುಂಬ ವರ್ಗದವರೊಂದಿಗೆ ಆಗಮಿಸಿ ಇಂದು ಪೂಜೆ ಸಲ್ಲಿಸಿದರು. ಪತ್ನಿ ಡಾಟಿ, ಪುತ್ರ ಕಾರ್ತಿಕ್, ಸೊಸೆ ಸ್ವಾತಿ ಹಾಗೂ ಮೊಮ್ಮಕ್ಕಳೊಂದಿಗೆ ಅವರು ಬೆಳಿಗ್ಗೆಯಿಂದ ಮಹಾಮೃತ್ಯುಂಜಯ ಹೋಮ ನೆರವೇರಿಸಿದರಲ್ಲದೆ, ಬಳಿಕ ಸಾಮೂಹಿಕ ಮೃತ್ಯುಂಜಯ ಹೋಮದಲ್ಲೂ ಪಾಲ್ಗೊಂಡಿದ್ದ ರಲ್ಲದೆ, ಅಪರಾಹ್ನದ ಭೋಜನದ ತನಕವೂ ದೇಗುಲದಲ್ಲಿ ಹಾಜರಿದ್ದರು.
ಮೋದಿಗೆ ಪ್ರಸಾದ
ಈ ಸಂದರ್ಭ ದೇವಾಲಯ ಸಮಿತಿ ಮೂಲಕ ದೇಶದ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಹಾಗೂ ದೇಶದ ಒಳಿತಿಗಾಗಿ ಪ್ರಾರ್ಥಿಸಿ, ವಿಶೇಷ ಪೂಜೆ ನಡೆಸಲಾಯಿತು. ಈ ಪೂಜೆಯ ಪ್ರಸಾದವನ್ನು ಸದಾನಂದಗೌಡರ ಮೂಲಕ ಮೋದಿ ಅವರಿಗೆ ರವಾನಿಸಲಾಗಿದ್ದು, ಇದನ್ನು ವೈಯಕ್ತಿಕವಾಗಿ ಮೋದಿ ಅವರಿಗೆ ತಲುಪಿಸುವುದಾಗಿ ಅವರು ಭರವಸೆ ನೀಡಿ ಸ್ವೀಕರಿಸಿದರು ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಲ್ಯಮೀದೇರಿರ ಎಸ್. ಸುರೇಶ್ ತಿಳಿಸಿದ್ದಾರೆ.
ಇವರ ಭೇಟಿ ಸಂದರ್ಭ ಆಡಳಿತ ಮಂಡಳಿಯ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು.