ವೀರಾಜಪೇಟೆ, ಜು. ೮: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ತರಕಾರಿ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಸಮುದ್ರ ಮೀನು ಮತ್ತು ಒಣ ಮೀನು ಮಾರುಕಟ್ಟೆಯನ್ನು ವೀರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಅತೃಪ್ತಿ ವ್ಯಕ್ತಪಡಿಸಿದರು.
ತರಕಾರಿ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣವು ಶಿಥಿಲಾವಸ್ಥೆಯಲ್ಲಿದ್ದು, ಇಲ್ಲಿನ ವ್ಯಾಪಾರಸ್ಥರ ಜೀವಕ್ಕೆ ಅಪಾಯ ಭೀತಿ ಇದೆ. ಮಳೆ ಸಂದರ್ಭ ಕೆಸರುಮಯವಾಗಿ ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಅದರ ಪಕ್ಕದಲ್ಲಿಯೇ ಇರುವ ಒಣ ಮೀನು ಮಾರುಕಟ್ಟೆ ಕೂಡ ಶಿಥಿಲಾವಸ್ಥೆಯಲ್ಲಿದ್ದು ಅವರಿಗೆ ಸೂಕ್ತ ನೆಲೆ ಕಲ್ಪಿಸುವಲ್ಲಿ ಪುರಸಭೆ ವಿಫಲವಾಗಿದೆ. ಮಾರುಕಟ್ಟೆಯ ಒಂದು ಪಾರ್ಶ್ವ ಅರ್ಧ ಕುಸಿದಿದ್ದು ಪೂರ್ಣ ಪ್ರಮಾಣದಲ್ಲಿ ಕುಸಿಯುವ ಹಂತದಲ್ಲಿ ಇದೆ ಎಂದು ಮಾರುಕಟ್ಟೆಯ ದುಸ್ಥಿತಿಯನ್ನು ವರ್ತಕರು ಶಾಸಕರಿಗೆ ವಿವರಿಸಿದರು.
ಖಾಸಗಿ ಬಸ್ ನಿಲ್ದಾಣದ ಸಮೀಪ ನೂತನ ಮಳಿಗೆಯನ್ನು ಪುರಸಭೆ ನಿರ್ಮಿಸಿ ಹಲವು ವರ್ಷಗಳಾಗಿದ್ದು, ಬಳಕೆಗೆ ಬಂದಿಲ್ಲ. ಇದು ನಿಷ್ಕಿçÃಯವಾಗಿರುವ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವು ದುರ್ವಾಸನೆಯಿಂದ ಕೂಡಿದ್ದು, ಕೊಳೆತು ನಾರುತ್ತಿದೆ. ಶೌಚಾಲಯವನ್ನು ೩೦ ವರ್ಷಗಳ ಕಾಲ ಗುತ್ತಿಗೆ ಪಡೆದುಕೊಂಡಿದ್ದು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಅದರೊಳಗೆ ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಪುರಸಭೆ ನಿರ್ಮಿಸಿದ ೭ ಲಕ್ಷದ ಹೈಟೆಕ್ ಶೌಚಾಲಯಕ್ಕೆ ಬೀಗ ಹಾಕಲಾಗಿದೆ ಎಂದು ಖಾಸಗಿ ಬಸ್ ನಿರ್ವಾಹಕ ಜೂಡಿವಾಸ್ ಶಾಸಕರ ಗಮನಕ್ಕೆ ತಂದರು.
ರೂ. ೨ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಮುದ್ರ ಮೀನು ಮತ್ತು ಒಣ ಮೀನು ಮಾರುಕಟ್ಟೆ ವೀಕ್ಷಿಸಿದ ಶಾಸಕರು ಮಾರುಕಟ್ಟೆ ಗ್ರಾಹಕ ಸ್ನೇಹಿ ಆಗಿಲ್ಲ ಸ್ಥಳ ಬಹಳ ಕಿಷ್ಕಿಂದೆಯಾಗಿದ್ದು ಗ್ರಾಹಕರಿಗೆ ಉತ್ತಮ ವ್ಯವಸ್ಥೆ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಶಾಸಕರು ಮಾತನಾಡಿ, ಪಟ್ಟಣದ ಅಭಿವೃದ್ಧಿ ಹಾಗೂ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮೀನು ಮಾರುಕಟ್ಟೆಯ ಮೊದಲ ಅಂತಸ್ತಿನ ಮಳಿಗೆ ನಿರ್ಮಾಣವಾಗಬೇಕಾಗಿದ್ದು, ಯಾವ ಕಾರಣಕ್ಕಾಗಿ ವಿಳಂಬವಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುವ ಅಗತ್ಯತೆ ಇದೆ. ಭವಿಷ್ಯದಲ್ಲಿ ಉತ್ತಮ ಮಾರಾಟ ಮಳಿಗೆ ನಿರ್ಮಿಸಲಾಗುವುದು. ಖಾಸಗಿ ಬಸ್ ನಿಲ್ದಾಣದಲ್ಲಿರುವ ಹೈಟೆಕ್ ಶೌಚಾಲಯವನ್ನು ಶೀಘ್ರ ಕಾರ್ಯಾರಂಭ ಮಾಡಲಾಗುವುದು. ಮೂರ್ನಾಡು ರಸ್ತೆಯಿಂದ ಚಿಕ್ಕಪೇಟೆಯವರೆಗೆ ರಸ್ತೆ ಬದಿ ಚರಂಡಿ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಾಹನ ಸವಾರರಿಗೆ ಸಮಸ್ಯೆ ಆಗದ ರೀತಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ತಹಶೀಲ್ದಾರ್ ರಾಮಚಂದ್ರ, ಮುಖ್ಯಾಧಿಕಾರಿ ಚಂದ್ರ ಕುಮಾರ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸದಸ್ಯರಾದ ಮೊಹಮ್ಮದ್ ರಾಫಿ, ರಜನಿಕಾಂತ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.