ಸೋಮವಾರಪೇಟೆ, ಜು. ೮: ಸೋಮವಾರಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಶಾಂತಳ್ಳಿ ಶಾಖೆಯ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸುಗ್ಗಿದೇವರ ಬನ ದೇವರಕಾಡು ಸಂರಕ್ಷಿತ ಅರಣ್ಯ ಪ್ರದೇಶದ ೫.೫೦ ಎಕರೆ ಜಾಗವನ್ನು ಹಿರಿಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ತಲ್ತರೆಶೆಟ್ಟಳ್ಳಿ ಗ್ರಾಮದ ಸುಗ್ಗಿದೇವರ ಬನ ದೇವರಕಾಡು ಸಂರಕ್ಷಿತ ಅರಣ್ಯ ಪ್ರದೇಶದ ಸ.ನಂ. ೨/೧ ರಲ್ಲಿ ೫.೫೦ ಏಕ್ರೆ ಜಾಗವನ್ನು ಅಭಿಮಠ ಗ್ರಾಮದ ಜಿ.ಟಿ. ಬೋಜರಾಜ್ ಅವರು ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದ ಬಗ್ಗೆ ಸೋಮವಾರಪೇಟೆ ವಲಯದಲ್ಲಿ ಒತ್ತುವರಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಅಂತಿಮವಾಗಿ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ೬೪(ಎ)ರಡಿಯಲ್ಲಿ ವಿಚಾರಣೆ ನಡೆಸಿ ತಾ.೧೬.೦೭.೨೦೧೮ರಂದು ಒತ್ತುವರಿದಾರರನ್ನು ಒತ್ತುವರಿ ಜಾಗದಿಂದ ತೆರವುಗೊಳಿಸಲು ಆದೇಶಿಸಿದ್ದರು. ನಂತರ ಒತ್ತುವರಿದಾರರು ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರ, ಕೊಡಗು ವೃತ್ತ, ಮಡಿಕೇರಿ ಇವರಿಗೆ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡದಿರಲಿಲ್ಲ.
ಮೇಲ್ಮನವಿ ಪ್ರಾಧಿಕಾರವು ತಾ.೧೦.೦೨.೨೦೨೩ ರಂದು ಅಂತಿಮ ಆದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು,
(ಮೊದಲ ಪುಟದಿಂದ) ಸೋಮವಾರಪೇಟೆ ಉಪ ವಿಭಾಗ, ಸೋಮವಾರಪೇಟೆ ಇವರು ಈ ಹಿಂದೆ ನೀಡಿದ ಆದೇಶವನ್ನು ಎತ್ತಿಹಿಡಿದಿದ್ದು, ಮೇಲ್ಮನವಿದಾರರು ಸುಗ್ಗಿದೇವರ ಬನ ದೇವರಕಾಡು ಸ.ನಂ. ೨/೧ರ ರಕ್ಷಿತಾರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿರುವ ಜಾಗವನ್ನು ೩೦ ದಿನಗಳ ಒಳಗಾಗಿ ಅದರಲ್ಲಿರುವ ಬೆಳೆ, ಕಟ್ಟಡ ಮತ್ತು ಇತರೆ ರಚನೆಗಳನ್ನು ತೆರವುಗೊಳಿಸಿ ಸದರಿ ಜಮೀನನ್ನು ಅರಣ್ಯ ಇಲಾಖೆಗೆ ವಹಿಸಿಕೊಡುವಂತೆ ಆದೇಶಿಸಿ, ಒತ್ತುವರಿದಾರರ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ಅದರಂತೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನಲ್ಲಿ ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಿದರು.
ದೇವರಕಾಡು ಜಾಗದಲ್ಲಿದ್ದ ಕಾಫಿ, ಕಿತ್ತಳೆ, ಇನ್ನಿತರ ವಾಣಿಜ್ಯ ಬೆಳೆಗಳನ್ನು ತೆರವುಗೊಳಿಸಿ ಒತ್ತುವರಿಯನ್ನು ಇಲಾಖಾ ಸುಪರ್ದಿಗೆ ಪಡೆದುಕೊಂಡು ಸುತ್ತಲೂ ಹಿಟಾಚಿ ಯಂತ್ರದ ಸಹಾಯದಿಂದ ಜಾನುವಾರು ನಿರೋಧಕ ಕಂದಕ ತೋಡಲಾಯಿತು. ಈ ಸಂದರ್ಭ ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಚೇತನ್ ಹೆಚ್.ಪಿ., ಶಾಂತಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎನ್.ಈ. ಸತೀಶ್, ಗಸ್ತು ಅರಣ್ಯ ಪಾಲಕರಾದ ಕಿರಣ್ ಬಿ.ಎನ್., ವಿಶ್ವ ಕರಿಮಲ್ಲಪ್ಪನವರ ಹಾಗೂ ಸೋಮವಾರಪೇಟೆ ವಲಯದ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಇಲಾಖಾ ಸಿಬ್ಬಂದಿಗಳು ಮತ್ತು ಕಂದಾಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಾರ್ಯಾಚರಣೆ ಸಂದರ್ಭ ತಲ್ತರೆಶೆಟ್ಟಳ್ಳಿ ಗ್ರಾಮದ ದೇವರಕಾಡು ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.