ಕುಶಾಲನಗರ, ಜು. ೭: ಹುಣ್ಣಿಮೆ ಅಂಗವಾಗಿ ಕುಶಾಲನಗರದಲ್ಲಿ ಜೀವನದಿ ಕಾವೇರಿಗೆ ೧೪೬ ನೆಯ ಮಹಾ ಆರತಿ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶಾಂತ ಶ್ರೀಪತಿ ಅವರು ಮಾತನಾಡಿ, ನದಿ, ಪ್ರಕೃತಿಯನ್ನು ಆರಾಧಿಸುವ ಮೂಲಕ ಸಂರಕ್ಷಣೆ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಆರೋಗ್ಯವಂತ ಜೀವನಕ್ಕೆ ಶುದ್ಧ ನೀರಿನ ಅವಶ್ಯಕತೆ ಸದಾ ಅಗತ್ಯ ಎಂದ ಅವರು, ಕಾವೇರಿ ನದಿಯ ರಕ್ಷಣೆ ಬಗ್ಗೆ ಹಲವು ವರ್ಷಗಳಿಂದ ಜನರಿಗೆ ಅರಿವು ಜಾಗೃತಿ ಮೂಡಿಸುತ್ತಿರುವ ಮಹಾ ಆರತಿ ಬಳಗದ ಪ್ರಮುಖರ ಸೇವಾ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.

ಕರ್ನಾಟಕ ಕಾವಲು ಪಡೆಯ ಕೊಡಗು ಜಿಲ್ಲಾಧ್ಯಕ್ಷ ಎಂ. ಕೃಷ್ಣ ಮಾತನಾಡಿ, ಸ್ವಚ್ಛ ಕಾವೇರಿ ಅಭಿಯಾನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ, ಅಷ್ಟೋತ್ತರ ನಂತರ ಸಾಮೂಹಿಕವಾಗಿ ನದಿಗೆ ಆರತಿ ಬೆಳಗಲಾಯಿತು.

ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಬಳಗದ ಪ್ರಮುಖರಾದ ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೆಪAಡ ಬೋಸ್ ಮೊಣ್ಣಪ್ಪ, ನಿವೃತ್ತ ಶಿಕ್ಷಣ ಅಧಿಕಾರಿ ಕೆಂಚಪ್ಪ ಮತ್ತಿತರರು ಇದ್ದರು.