ಮಡಿಕೇರಿ, ಜು. ೪: ಇದೇ ಶುಕ್ರವಾರ ಜುಲೈ ೭ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ರಾಜ್ಯ ಬಜೆಟ್ ಮೇಲೆ ಕಾವೇರಿ ತವರು ಜಿಲ್ಲೆ ಕೊಡಗಿನ ಜನತೆಗೆ ಹಲವಾರು ನಿರೀಕ್ಷೆಗಳು ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಲಿರುವ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳ ಬಳಿಕ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗನ್ನು ಛಿದ್ರಗೊಳಿಸಿ ಯುವ ಶಾಸಕರಿಬ್ಬರು ಕಾಂಗ್ರೆಸ್ ತೆಕ್ಕೆಗೆ ತಂದುಕೊಟ್ಟಿದ್ದಾರೆ.
೨೦೧೩ ರಿಂದ ೧೮ ವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಲ್ಲಿತ್ತು.
ಆಗ ಕೊಡಗಿನಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
೨೦೧೮ ರಲ್ಲಿ ಕೂಡ ಬಿಜೆಪಿ ಶಾಸಕರೇ ಗೆಲುವು ಸಾಧಿಸಿದ್ದರು.
೨೦೧೮ ರಿಂದ ೧೯ ವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು.
೨೦೧೯ ರಿಂದ ೨೩ ವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ತಮ್ಮದೇ ಶಾಸಕರು ಹಾಗೂ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿಗೆ ಯಾವುದೇ ವಿಶೇಷ ಯೋಜನೆಯನ್ನು ಘೋಷಣೆ ಮಾಡಿರಲಿಲ್ಲ.ಕಳೆದ ಫೆಬ್ರವರಿ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ್ದ ರಾಜ್ಯ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ರಸ್ತೆಗಳ ಅಭಿವೃದ್ಧಿ ರೂ. ೧೦೦ ಕೋಟಿ ಅನುದಾನ ಘೋಷಿಸಿದ್ದರು.
ಜಿಲ್ಲೆಯ ಜನರ ಬಹುಬೇಡಿಕೆಯ ಹಲವು ಯೋಜನೆಯನ್ನು ಘೋಷಿಸದೆ. ಬಜೆಟ್ನಲ್ಲಿ ಬಿಜೆಪಿ ಸರ್ಕಾರ ಕೊಡಗು ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ.
ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಗಳು ಇತ್ತು. ಆದರೆ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಇದರಿಂದ ಜಿಲ್ಲೆಯಲ್ಲಿ ಸರ್ಕಾರದ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿತ್ತು.
ನಂತರ ರಾಜ್ಯ ಸರ್ಕಾರ ಎ.ಎಸ್. ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳ ಅವರ ಕಾನೂನು ಸಲಹೆಗಾರರಾಗಿ ನೇಮಕ ಮಾಡಿದ್ದರು. ಸಚಿವ ಸ್ಥಾನ ಕೈ ತಪ್ಪಿದ ಕೊಡಗು, ಜಿಲ್ಲೆಗೆ ಹಲವು ವಿಶೇಷ ಯೋಜನೆಗಳು ಘೋಷಣೆ ಮಾಡುವ ನಿರೀಕ್ಷೆಗಳು ಹುಟ್ಟಿದೆ.
ಈಡೇರುತ್ತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕನಸು!
ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕೆಂಬ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಇದುವರೆಗೆ ಈ ಕೂಗಿಗೆ ಯಾವ ಸರ್ಕಾರ ಕೂಡ ಸ್ಪಂದಿಸಿಲ್ಲ. ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗು ಕೇವಲ ಕನಸಾಗಿ ಮಾತ್ರ ಉಳಿದಿದೆ.
ಜಿಲ್ಲೆಯಲ್ಲಿ ಅಪಘಾತಗಳು ಹಾಗೂ ಹೃದಯ ಸಂಬAಧಿತವಾದ ಕಾಯಿಲೆಗಳಿಗೆ ಜಿಲ್ಲೆಯ ಜನರು ೧೦೦ ರಿಂದ ೧೫೦ ಕಿಲೋ ಮೀಟರ್ ದೂರದ ಮೈಸೂರು ಹಾಗೂ ಮಂಗಳೂರು ಆಸ್ಪತ್ರೆಯನ್ನು ಅವಲಂಬಿಸಬೇಕಾದ ಅನಿವಾರ್ಯವಾತೆ ಇದೆ.
ತುರ್ತು ಸಂದರ್ಭಗಳಲ್ಲಿ ಮಂಗಳೂರು ಹಾಗೂ ಮೈಸೂರು ಜಿಲ್ಲೆಯ ಆಸ್ಪತ್ರೆಗಳಿಗೆ ಪ್ರಯಾಣಿಸುವ ದಾರಿ ಮಧ್ಯದಲ್ಲಿಯೇ, ಅಸುನೀಗಿರುವ ಹಲವು ನಿದರ್ಶನಗಳು ಇವೆ. ಆದರೂ ಕೂಡ ಜಿಲ್ಲೆಯ ಜನರ ಒಕ್ಕೊರಲಿನ ಕೂಗಿಗೆ ಇದುವರೆಗೆ ಸ್ಪಂದನೆ ದೊರೆತಿಲ್ಲ.
ಜಿಲ್ಲೆಯ ನೂತನ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂಥರ್ ಗೌಡ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು.
ನೂತನ ಶಾಸಕದ್ವಯರು ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಮೊದಲ ಆದ್ಯತೆ ನೀಡುವ ವಿಶ್ವಾಸ ಜನರಲ್ಲಿದೆ. ಈ ಸಂಬAಧ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.ಶುಕ್ರವಾರ ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಯಾಗುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ರಸ್ತೆಗಳ ಅಭಿವೃದ್ಧಿಗೆ ಬೇಕಿದೆ ವಿಶೇಷ ಅನುದಾನ!
ಫೆಬ್ರವರಿ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಬಜೆಟ್ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಕೇವಲ ನೂರು ಕೋಟಿ ಅನುದಾನ ಮಾತ್ರ ಘೋಷಣೆ ಮಾಡಿದ್ದರು.
ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಕನಿಷ್ಟ ೫೦೦ ಕೋಟಿ ರೂಪಾಯಿಗಳ ವಿಶೇಷ ಅನುದಾನ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಪ್ರತೀ ವರ್ಷ ಸುರಿಯುವ ಮಳೆಯಿಂದ ರಸ್ತೆಗಳ ಹದೆಗೆಡುತ್ತಿದೆ. ಇಂದಿಗೂ ಕೂಡ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಡಾಂಬರು ಭಾಗ್ಯ ಕಾಣದೇ ಉಳಿದಿದೆ. ಗ್ರಾಮೀಣ ಭಾಗದ ರಸ್ತೆಗಳು ಜಿಲ್ಲೆಯಲ್ಲಿ ಹದೆಗೆಟ್ಟಿದೆ.
ಪ್ರಾಕೃತಿಕ ವಿಕೋಪ, ಅತಿಯಾದ ಮಳೆಯಿಂದ ಜಿಲ್ಲೆಯಲ್ಲಿ ರಸ್ತೆಗಳ ಡಾಂಬರು ಕಿತ್ತು ಬರುತ್ತಿದೆ. ಗುಂಡಿಬಿದ್ದ ರಸ್ತೆಗಳಿಂದ ಅಪಘಾತಗಳು ಸಂಭವಿಸಿ,ಸಾವನ್ನಪ್ಪಿರುವ ಘಟನೆಗಳು ಕೂಡ ಜಿಲ್ಲೆಯಲ್ಲಿ ನಡೆದಿದೆ.
ಈ ಬಾರಿಯ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ರಸ್ತೆಗಳ ಅಭಿವೃದ್ಧಿಗಾಗಿ ರೂ. ೫೦೦ ಕೋಟಿ ಅಧಿಕ ವಿಶೇಷ ಅನುದಾನ ಘೋಷಣೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಕೇವಲ ರೂ. ೫೦,೧೦೦ ಕೋಟಿ ರಸ್ತೆಗಳ ಅಭಿವೃದ್ಧಿ ನೀಡುವುದರಿಂದ ಗ್ರಾಮೀಣ ಭಾಗದ ರಸ್ತೆ ಸಮಸ್ಯೆಗಳಿಗೆ ಮುಕ್ತಿ ಸಿಗುವುದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಮಾಡುತ್ತಾರಾ? ಎಂದು ನೋಡಬೇಕಾಗಿದೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ