ವಿಧಾನ ಸಭೆಯಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ, ಗದ್ದಲ
ಬೆಂಗಳೂರು, ಜು. ೪: ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಮಂಗಳವಾರ ಬೆಳಿಗ್ಗೆ ವಿಧಾನ ಸಭೆ ಕಲಾಪ ಸೇರಿದಾಗಲೇ ತೀವ್ರ ಪ್ರತಿಭಟನೆ ಮಾಡಿದ್ದರಿಂದ ಸ್ಪೀಕರ್ ಅವರು ಕಲಾಪವನ್ನು ಅಪರಾಹ್ನ ೩ ಗಂಟೆಗೆ ಮುಂದೂಡಿದರು. ಕಲಾಪ ಆರಂಭವಾಗುತ್ತಿದ್ದAತೆ ಬಿಜೆಪಿ ಸದಸ್ಯರು ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತಿಗೆ ತೃಪ್ತರಾಗದ ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಅವರು ಎಷ್ಟೇ ಮನವಿ ಮಾಡಿ ಕೊಂಡರೂ ಕೇಳಲಿಲ್ಲ. ಇದರಿಂದ ಸ್ಪೀಕರ್ ಯು.ಟಿ. ಖಾದರ್ ಕಲಾಪವನ್ನು ಕೆಲ ಹೊತ್ತಿಗೆ ಮುಂದೂಡಿದರು. ಸ್ಪೀಕರ್ ಪ್ರಶ್ನೆ ಮಾಡಲು ಅವಕಾಶ ನೀಡುವುದರೊಂದಿಗೆ ಇಂದು ಬೆಳಗ್ಗೆ ಕಲಾಪ ಆರಂಭವಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನೋತ್ತರ ವೇಳೆಯಲ್ಲಿ ಮುಂದೂಡಿಕೆ ನಿರ್ಣಯ ಅಂಗೀಕರಿಸಿ ಚರ್ಚೆಗೆ ಒತ್ತಾಯಿಸಿದರು. ಅದಕ್ಕೆ ಬಿಜೆಪಿ ಶಾಸಕ ಆರ್. ಅಶೋಕ ಅವರು ಧನಿಗೂಡಿಸಿ, ಐದು ಖಾತರಿಗಳ ಹೆಸರಿನಲ್ಲಿ ಸರ್ಕಾರ ಜನರನ್ನು "ಮೋಸ" ಮಾಡುತ್ತಿದೆ ಎಂದು ಆರೋಪಿಸಿದರು. ಕೇಸರಿ ಪಕ್ಷದ ಇತರ ಶಾಸಕರು ಇದಕ್ಕೆ ಧನಿಗೂಡಿಸಿದಾಗ ತೀವ್ರ ಗದ್ದಲ, ಕೋಲಾಹಲ ಉಂಟಾಯಿತು. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡುವಂತೆ ಪ್ರತಿಪಕ್ಷ ಬಿಜೆಪಿಗೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆಗ ಎದ್ದುನಿಂತು ಮಾತನಾಡಿದ ಡಿಸಿಎಂ ಶಿವ ಕುಮಾರ್, ಐದು ಭರವಸೆಗಳ ಯಶಸ್ಸನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಶ್ನೋತ್ತರ ಅವಧಿ ನಡೆಯಲಿ. ಆಗ ನಾವು ಬಿಜೆಪಿಯವರ ಬುದ್ದಿವಂತಿಕೆ ಮಾತು ಕೇಳುತ್ತೇವೆ ಎಂದರು. ಆದರೆ, ಐದು ಭರವಸೆಗಳ ಜಾರಿಯಲ್ಲಿನ ವೈಫಲ್ಯದ ಬಗ್ಗೆ ಬಿಜೆಪಿ ಶಾಸಕರು ಪಟ್ಟು ಹಿಡಿದರು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂಪಾಯಿ ಜಮಾ ಮಾಡುವ ಮತ್ತು ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರುವ ಭರವಸೆಯನ್ನು ಬಿಜೆಪಿ ಎಂದಾದರೂ ಈಡೇರಿಸಿದೆಯೇ ಎಂದು ಶಿವಕುಮಾರ್ ಪ್ರಶ್ನಿಸಿದರು. ನಮ್ಮ ಭರವಸೆಗಳಿಗೆ ನಾವು ಬದ್ಧರಾಗಿದ್ದೇವೆ. ನಾವು ಅವುಗಳನ್ನು ಈಡೇರಿಸುತ್ತೇವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಬಿಜೆಪಿ ತನ್ನ ಬಿಗಿಪಟ್ಟು ಸಡಿಲಿಸುವಂತೆ ಕೇಳಿಕೊಂಡರು. ಕೂಡಲೇ ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು.
ಫ್ರೀಡಂ ಪಾರ್ಕ್ನಲ್ಲಿ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಜು. ೪: ಕಾಂಗ್ರೆಸ್ ಐದು ಗ್ಯಾರಂಟಿ ಘೋಷಣೆ ವಿಳಂಬ ವಿರೋಧಿಸಿ, ೫ ಗ್ಯಾರಂಟಿಗಳಿಗೆ ವಿಧಿಸಿರುವ ಷರತ್ತುಗಳು, ಗೋ ಹತ್ಯೆ ಮತ್ತು ಮತಾಂತರ ಕಾಯ್ದೆಯನ್ನ ವಾಪಾಸ್ ಪಡೆಯುತ್ತಿರುವ ಬಗ್ಗೆ ವಿರೋಧಿಸಿ ಮಂಗಳವಾರ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ನಗರದ ಫ್ರೀಡಂ ಪಾರ್ಕ್ನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾಂಗ್ರೆಸ್ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಮಾತ್ರ ಜಾರಿಗೊಂಡಿದೆ. ಇನ್ನು ಅನ್ನಭಾಗ್ಯ ಯೋಜನೆ ಜಾರಿಗೊಂಡರೂ ಅಕ್ಕಿ ಬದಲಾಗಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಐದು ಕೆ.ಜಿ. ಅಕ್ಕಿ ಹೊರತಾಗಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಹತ್ತು ಕೆಜಿ ಅಕ್ಕಿಯ ಹಣ ಕೊಡಬೇಕು ಎಂದು ಬಿಜೆಪಿ ನಾಯಕರು ಸರ್ಕಾರವನ್ನು ಆಗ್ರಹಿಸಿದರು.
ವಾಟ್ಸಾಪ್ ಸ್ಟೇಟಸ್ ಹಾಕಿ ಗೃಹಿಣಿ ನೇಣಿಗೆ ಶರಣು
ಬೆಂಗಳೂರು, ಜು. ೪: ಪತಿ ಹಾಗೂ ಆತನ ಗರ್ಲ್ಫ್ರೆಂಡ್ ವಿರುದ್ಧ ಡೆತ್ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಂಡನ ಅನೈತಿಕ ಸಂಬAಧಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಮೃತ ಮಹಿಳೆ. ಡೆತ್ನೋಟ್ ಬರೆದಿಟ್ಟು ವಾಟ್ಸಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ. ಮೃತ ಪವಿತ್ರಾ ಮೊದಲ ಪತಿಗೆ ವಿಚ್ಚೇದನ ನೀಡಿ, ಚೇತನ್ಗೌಡ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು. ಪವಿತ್ರಾಳ ಎರಡನೇ ಪತಿ ಚೇತನ್ಗೌಡ ಉದ್ಯಮಿಯಾಗಿದ್ದು, ಪವಿತ್ರ ಚೇತನ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಮತ್ತೊರ್ವ ಯುವತಿಯ ವಿಚಾರವಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿತ್ತು. ಈ ಬಗ್ಗೆ ಪವಿತ್ರ ತನ್ನ ತಾಯಿ ಪದ್ಮಮ್ಮ ಬಳಿ ತಿಳಿಸಿದ್ದಳು. ಕಡೆಗೆ ಮನನೊಂದು ಡೆತ್ನೋಟ್ ಬರೆದು ವಾಟ್ಸಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ. ನನ್ನ ಸಾವಿಗೆ ಗಂಡನಾದ ಚೇತನ್ಗೌಡ ಹಾಗೂ ಪೂಜಾ ಗೌಡ ಕಾರಣರಾಗಿರುತ್ತಾರೆ.
ನಾಲ್ಕು ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ
ನವದೆಹಲಿ, ಜು. ೪: ೨೦೨೪ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಸಂಘಟನಾತ್ಮಕವಾಗಿ ಪುನಶ್ಚೇತನಗೊಳಿಸಲು ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ತನ್ನ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ಮಂಗಳವಾರ ನೇಮಿಸಿದೆ. ವಿಧಾನಸಭೆ ಚುನಾವಣೆ ಎದುರಿಸಲಿರುವ ತೆಲಂಗಾಣದಲ್ಲಿಯೂ ರಾಜ್ಯಾಧ್ಯಕ್ಷರ ಬದಲಾವಣೆಯಾಗಿದೆ. ತೆಲಂಗಾಣ ಬಿಜೆಪಿ ಅಧ್ಯಕ್ಷರಾಗಿ ಜಿ. ಕಿಶನ್ ರೆಡ್ಡಿ, ಆಂಧ್ರಪ್ರದೇಶದ ರಾಜ್ಯಾಧ್ಯಕ್ಷರಾಗಿ ಡಿ. ಪುರಂದೇಶ್ವರಿ, ಜಾರ್ಖಂಡ್ನ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಮತ್ತು ಪಂಜಾಬ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಸುನೀಲ್ ಜಾಖರ್ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರ ನೇತೃತ್ವದಲ್ಲಿ ನಡೆದ ಸಭೆಗಳ ನಡುವೆ ಬಿಜೆಪಿಯಲ್ಲಿ ಸಂಘಟನಾ ಪುನರ್ರಚನೆಯ ಬಗ್ಗೆ ಚರ್ಚೆ ನಡೆದಿದೆ.
ತಮಿಳುನಾಡಿನ ಹೊಟೇಲ್ ಉದ್ಯಮಿ ಹತ್ಯೆ-ಐವರ ಬಂಧನ
ಬೆAಗಳೂರು, ಜು. ೪: ಹೊಟೇಲ್ ಉದ್ಯಮಿ ಅರುಣ್ ಕುಮಾರ್ (೩೪) ಅವರ ಹತ್ಯೆಯನ್ನು ಅವರ ಪತ್ನಿ ಮತ್ತು ಫೈನಾನ್ಷಿಯರ್ ಆಗಿರುವ ಆಕೆಯ ಪ್ರಿಯಕರ ಸೇರಿದಂತೆ ಐವರನ್ನು ಬಂಧಿಸುವ ಮೂಲಕ ಪರಿಹರಿಸಲಾಗಿದೆ. ಕಳೆದ ವಾರ ನೈಸ್ ರಸ್ತೆ ಬಳಿಯ ರಸ್ತೆ ಮೇಲ್ಸೇತುವೆಯ ಕೆಳಗೆ ಕುಮಾರ್ ಶವ ಪತ್ತೆಯಾಗಿತ್ತು. ಆರೋಪಿಗಳು ಮದ್ಯದ ಬಾಟಲಿಗಳಿಂದ ಹಲ್ಲೆ ನಡೆಸಿ, ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದರು. ಪೊಲೀಸ್ ಶ್ವಾನಗಳನ್ನು ದಾರಿತಪ್ಪಿಸಲು ಶವದ ಬಳಿಯೂ ಮೆಣಸಿನ ಪುಡಿಯನ್ನು ಚೆಲ್ಲಿದ್ದರು. ಫೈನಾನ್ಷಿಯರ್ ಮತ್ತು ಇತರ ಮೂವರು ವ್ಯಕ್ತಿಗಳು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜೂನ್ ೨೯ ರಂದು ಬೆಳಿಗ್ಗೆ ೭.೨೦ರ ಸುಮಾರಿಗೆ ಬನಶಂಕರಿ ೬ನೇ ಹಂತದ ಸೋಂಪುರ-ಗಟ್ಟಿಗೆರೆಪಾಳ್ಯ ರಸ್ತೆಯ ನೈಸ್ ರಸ್ತೆಯ ಬಳಿ ಕುಮಾರ್ ಶವ ಪತ್ತೆಯಾಗಿತ್ತು. ದಾರಿಹೋಕ ರೊಬ್ಬರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಮನಗರ ಜಿಲ್ಲೆಯ ನನ್ನೂರು ಗ್ರಾಮದವರಾದ ಕುಮಾರ್, ಆರ್.ಆರ್. ನಗರದ ಉತ್ತರಹಳ್ಳಿ ರಸ್ತೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ಪ್ರಮುಖ ಆರೋಪಿ ಗಣೇಶ್ ಕುಮಾರ್ ಅವರ ಹೊಟೇಲ್ಗೆ ನೀರು ಸರಬರಾಜು ಮಾಡುತ್ತಿದ್ದ. ಸಂತ್ರಸ್ತ ಗಣೇಶ್ ಹಾಗೂ ಆತನ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದರು. ನಷ್ಟ ಅನುಭವಿಸಿದ ನಂತರ ಕುಮಾರ್ ಹೊಟೇಲ್ ಮುಚ್ಚಿದ್ದರು. ಇದೇ ವೇಳೆ ಗಣೇಶ್, ಕುಮಾರ್ ಅವರ ಪತ್ನಿ ರಂಜಿತಾ ರೊಂದಿಗೆ ಸ್ನೇಹ ಬೆಳೆಸಿದ್ದ. ಕುಮಾರ್ ಮತ್ತು ರಂಜಿತಾ ಮದುವೆಯಾಗಿ ಆರು ವರ್ಷವಾಗಿತ್ತು. ಪತ್ನಿಯ ಅಕ್ರಮ ಸಂಬAಧದ ವಿಚಾರ ತಿಳಿದ ಕುಮಾರ್ ಆಕೆಗೆ ಹಾಗೂ ಗಣೇಶ್ಗೆ ಎಚ್ಚರಿಕೆ ನೀಡಿದ್ದರು. ಸಂಬAಧ ಮುಂದುವರಿಸಿರುವುದನ್ನು ಕಂಡ ಕುಮಾರ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದರು. ಕುಮಾರ್ ಆ ಸ್ಥಳಕ್ಕೆ ಹೋದಾಗ ಆರೋಪಿಗಳು ಆತನ ಮುಖದ ಮೇಲೆ ಮೆಣಸಿನ ಪುಡಿ ಎರಚಿ ಕೊಲೆ ಮಾಡಿದ್ದಾರೆ. ಮದ್ಯದ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ. ರಂಜಿತಾ, ಗಣೇಶ್, ಶಿವಾನಂದ, ದೀಪು ಮತ್ತು ಶರತ್ ಎಂಬುವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತಲಗಟ್ಟಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.