ಕೂಡಿಗೆ, ಜು. ೫: ಕಳೆದ ವರ್ಷ ನೀರಿನ ಸಂಗ್ರಹದ ಮಿತಿ ಬಹುತೇಕ ಗರಿಷ್ಠಕ್ಕೆ ತಲುಪಿದ ಕಾರಣ ಜುಲೈ ೩ ರಂದು ಹಾರಂಗಿ ಅಣೆಕಟ್ಟೆಯ ದ್ವಾರಗಳನ್ನು ತೆರೆÀದು, ನದಿ-ನಾಲೆಗಳಿಗೆ ನೀರು ಬಿಡಲು ಪ್ರಾರಂಭಿಸಲಾಗಿತ್ತು. ಆದರೆ ಈ ಬಾರಿ ಜುಲೈ ೫ ಕಳೆದರೂ ಜಿಲ್ಲೆಯಾದ್ಯಂತ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿರುವುದರಿಂದ ಅಣೆಕಟ್ಟೆಯ ಗರಿಷ್ಠ ಪ್ರಮಾಣಕ್ಕಿಂತ ಬಹುತೇಕ ೪೦ ಅಡಿಯಷ್ಟು ಕೆಳಕ್ಕೆ ಮಾತ್ರ ನೀರು ತಲುಪಿದೆ.
ಕಳೆದ ವರ್ಷ ಜನವರಿಯಿಂದಲೇ ಮಳೆಯಾಗಿದ್ದು, ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹÀ ಮಟ್ಟ ಹೆಚ್ಚಾಗಿ ಜುಲೈ ೩ ರಂದು ಅಣೆಕಟ್ಟೆಯು ಬಹತೇಕ ಭರ್ತಿಯಾಗಿ ನದಿಗೆ ೧೨,೮೬೬ ಕ್ಯೂಸೆಕ್ಸ್ (೧ ಕ್ಯೂಸೆಕ್ಸ್ ಅಂದರೆ ೧ ಸೆಕೆಂಡಿಗೆ ೨೮.೩೧೭ ಲೀಟರ್ ನೀರಿನ ಹರಿವು) ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟವು ಕಳೆದ ಸಾಲಿಗಿಂತ ೪೦ ಅಡಿಗಳಷ್ಟು ಕಡಿಮೆ ಇದೆ. ಕಳೆದ ೧೫ ವರ್ಷಗಳ ಹಿಂದೆಯೂ ಇಷ್ಟೇ ಕ್ಷೀಣವಾಗಿ ಮಳೆ ಆಗಿ ನೀರಿನ ಪ್ರಮಾಣವು ಕುಸಿತಗೊಂಡಿತ್ತು.
ಹಾರAಗಿಯ ಅಣೆಕಟ್ಟೆಯ ಗರಿಷ್ಠ ಮಟ್ಟವು ಸಮುದ್ರ ಮಟ್ಟಕ್ಕಿಂತ ೨,೮೫೯ ಅಡಿ ಆಗಿದ್ದು, ಪ್ರಸ್ತುತ ಕೇವಲ ೨,೮೨೩.೯೯ ಅಡಿ ಎತ್ತರಕ್ಕೆ ಮಾತ್ರ ನೀರು ಇದೆ. ಒಟ್ಟು ನೀರಿನ ಪ್ರಮಾಣವು ೨.೨೮ ಟಿ.ಎಮ್.ಸಿ (೧ ಟಿ.ಎಮ್.ಸಿ ಅಂದರೆ ೨,೮೩೧ ಕೋಟಿ ಲೀಟರ್) ಆಗಿದೆೆ. ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಒಟ್ಟು ಮೊತ್ತವು ೨,೮೫೪ ಅಡಿಯಿದ್ದು, ಗರಿಷ್ಠ ಮಟ್ಟಕ್ಕೆ ಕೇವಲ ೫ ಅಡಿಯಷ್ಟೇ ಬಾಕಿಯಿತ್ತು. ನೀರಿನ ಮೊತ್ತವು ೬.೧೮ ಟಿ.ಎಮ್.ಸಿ ಯಷ್ಟಿತ್ತು.
ಒಳಹರಿವು-ಹೊರಹರಿವು
ಕಳೆದ ವರ್ಷ ಇದೇ ವೇಳೆಗೆ ಅಣೆಕಟ್ಟೆಗೆ ೯,೪೯೭ ಕ್ಯೂಸೆಕ್ಸ್ ಪ್ರಮಾಣದಷ್ಟು ನೀರಿನ ಒಳಹರಿವಿತ್ತು. ನದಿಗೆ ೧೨,೮೬೬ ಕೂಸೆಕ್ಸ್ ಹಾಗೂ ನಾಲೆಗೆ ೨೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿತ್ತು. ಆದರೆ ಈ ಬಾರಿ ಅಣೆಕಟ್ಟೆಗೆ ನೀರಿನ ಒಳಹರಿವಿನ ಪ್ರಮಾಣ ಜುಲೈ ೫ ರಂದು ಕೇವಲ ೧,೫೧೮ ಕ್ಯೂಸೆಕ್ಸ್ ಆಗಿದೆ. ನದಿಗೆ ಕೇವಲ ೩೦ ಕ್ಯೂಸೆಕ್ಸ್ ಹಾಗೂ ನಾಲೆಗೆ ೨೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.
ಕಳೆದ ವರ್ಷ ಜುಲೈ ೩ ರಂದು ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸುರಕ್ಷತೆಯ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಬರುವ ನೀರನ್ನು ವಿದ್ಯುತ್ ಘಟಕದ ಮೂಲಕ ನದಿಗೆ ಮತ್ತು ಸಣ್ಣ ಪ್ರಮಾಣದಲ್ಲಿ ನಾಲೆಗಳಿಗೆ ಹರಿಸಲಾಗಿತ್ತು.
ಆದರೆ ಈ ಬಾರಿ ಅಣೆಕಟ್ಟೆಯೇ ತುಂಬಲು ಬಹುತೇಕ ೪೦ ಅಡಿಗಳಷ್ಟು ಬಾಕಿ ಇರುವ ಹಿನ್ನೆಲೆಯಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿರುವ ಕೊಡಗಿನ ಗಡಿ
(ಮೊದಲ ಪುಟದಿಂದ) ಭಾಗವಾದ ಶಿರಂಗಾಲ ಗ್ರಾಮವರೆಗಿನ, ತಮ್ಮ ಜಮೀನಿನಲ್ಲಿ ನಾಲೆಯ ನೀರನ್ನೇ ಅವಲಂಬಿಸಿ ಭತ್ತದ ನಾಟಿ ಮಾಡುವ ರೈತರು ಸಸಿಮಡಿಗಳ ಸಿದ್ದತೆಗೆ ಮುಂದಾಗಿರುವುದು ಕಂಡುಬAದಿಲ್ಲ.
ಕಳೆದ ವರ್ಷ ಹಾರಂಗಿಯ ಅಣೆಕಟ್ಟೆಯ ದ್ವಾರಗಳಿಂದ ನೀರು ಹರಿಯುವಿಕೆ ದೃಶ್ಯವನ್ನು ಕಣ್ತುಂಬಿಕೊಳ್ಳಲು ದಿನಂಪ್ರತಿ ಸಾವಿರಾರು ಪ್ರವಾಸಿಗರು ಹಾರಂಗಿಗೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಮುಂಗಾರು ಮಳೆ ಇಲ್ಲದೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವು ಕಡಿಮೆ ಇರುವುದರಿಂದಾಗಿ ಪ್ರವಾಸಿಗರೇ ಆಗಮಿಸುತ್ತಿಲ್ಲ.
ಮುಂದಿನ ದಿನಗಳಲ್ಲಿ ಮಳೆ ಬಂದು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಮಟ್ಟದಲ್ಲಿ ಏರಿಕೆಯಾದರೆ ಅದನ್ನು ಸಂಪೂರ್ಣವಾಗಿ ಸಂಗ್ರಹಿಸಿ ನಾಲೆಗಳ ಮೂಲಕ ಮೊದಲು ರೈತರ ಬೇಸಾಯಕ್ಕೆ ನೀರು ಒದಗಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.
ಈ ಸಾಲಿನಲ್ಲಿ ಜಿಲ್ಲೆಯ ಪ್ರಮುಖ ಅಣೆಕಟ್ಟೆಗಳಾದ ಹಾರಂಗಿ ಮತ್ತು ಚಿಕ್ಲಿಹೊಳೆಯಲ್ಲಿ ನೀರಿನ ಮಟ್ಟ ತಳಕಂಡಿದ್ದು ರೈತರಲ್ಲಿ ಆತಂಕ ಉಂಟುಮಾಡಿದೆ. ಮಳೆಯ ಕೊರತೆ ಬೆನ್ನಲ್ಲೇ ಬಿತ್ತನೆ ಮಾಡಿದ್ದ ಬೆಳೆಗಳಿಗೆ ನೀರಿಲ್ಲದೆ ಬೆಳೆ ಸೊರಗಿರುವ ದೃಶ್ಯಗಳು ಕಂಡುಬರುತ್ತಿವೆ. ಕಳೆದ ವರ್ಷ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿ ಜೂ.೨೦ ಕ್ಕೆ ಹೆಚ್ಚುವರಿ ನೀರು ನದಿಯತ್ತ ಮುಖಮಾಡಿತ್ತು. ಆದರೆ ಈ ಬಾರಿ ಅಣೆಕಟ್ಟೆಯಲ್ಲಿ ಬಹುತೇಕ ಶೇ.೯೦ ಭಾಗದಷ್ಟು ನೀರಿನ ಪ್ರಮಾಣ ಕುಸಿತಗೊಂಡಿರುವುದು ಕಂಡುಬAದಿದೆ. ಚಿಕ್ಲಿಹೊಳೆ ಹಿನ್ನೀರು ಭರ್ತಿಯಾದ ನಂತರ ಹೆಚ್ಚುವರಿ ನೀರು ಸುರುಳಿಯಾಕಾರದಲ್ಲಿ ನದಿಗೆ ಹರಿಯುವ ದೃಶ್ಯ ಕಣ್ತುಂಬಿಸಿಕೊಳ್ಳಲು ಪ್ರವಾಸಿಗರು ಅಣೆಕಟ್ಟೆಯತ್ತ ಲಗ್ಗೆಯಿಡುತ್ತಾರೆ. ಈ ನೀರು ಹರಿಯುವ ದೃಶ್ಯ ಮಳೆಗಾಲದಲ್ಲಿ ವಿಶೇಷ ಆಕರ್ಷಣೆ. ಆದರೆ ಈ ಬಾರಿ ಮುಂಗಾರು ಕೊರತೆಯಿಂದ ನೀರು ಭರ್ತಿಯಾಗದ ಕಾರಣ ಇಲ್ಲಿಗೆ ಆಗಮಿಸುವ ಪ್ರವಾಸಿಗರು ನಿರಾಸೆಯಿಂದ ವಾಪಾಸ್ ತೆರಳುತ್ತಿರುವ ದೃಶ್ಯ ಕಂಡುಬರುತ್ತಿದೆ.
ಒಣಗುತ್ತಿರುವ ಬೆಳೆಗಳು: ಮಳೆಯನ್ನೇ ನಂಬಿ ಕೃಷಿ ಮಾಡುವ ವರ್ಗ ಕುಶಾಲನಗರ ತಾಲೂಕಿನಲ್ಲಿ ಹೆಚ್ಚಿದ್ದಾರೆ. ಕೊಳವೆ ಬಾವಿ ವ್ಯವಸ್ಥೆ ಇಲ್ಲದ ಮಂದಿ ಮಳೆ ಹಾಗೂ ಅಣೆಕಟ್ಟೆಯನ್ನು ಆಶ್ರಯಿಸಿದ್ದು, ಬೆಳೆ ಬೆಳೆದವರ ಪರಿಸ್ಥಿತಿ ಹದಗೆಟ್ಟಿದೆ.
ಪೂರ್ವ ಮುಂಗಾರು ನಂಬಿ ಬಿತ್ತನೆ ಮಾಡಿದವರು ಇದೀಗ ಸಕಾಲದಲ್ಲಿ ಮಳೆಯಾಗದ ಕಾರಣ ಇತ್ತ ಬೆಳೆ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಬಿತ್ತನೆ ಮಾಡಿದ ಜೋಳದ ಬೆಳೆ ಮಳೆಯಿಲ್ಲದೆ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಕಂಡುಬAದಿಲ್ಲ. ಹಲವೆಡೆ ಅತಿವೃಷ್ಠಿಯಿಂದ ಬೆಳೆಹಾನಿಯಾಗುತ್ತಿದ್ದರೆ, ಇನ್ನೊಂದೆಡೆ ಅನಾವೃಷ್ಟಿ ಕಾರಣ ಬೆಳೆ ಬೆಳೆಯಲು ಅಡ್ಡಿಯುಂಟಾಗಿದೆ.
ಒಟ್ಟಾರೆ ಮಳೆಗೆ ಹೆಸರಾದ ಜೂನ್, ಜುಲೈ ತಿಂಗಳುಗಳಲ್ಲಿ ಮಳೆ ಕ್ಷೀಣವಾಗಿದ್ದು, ರೈತಾಪಿ ವರ್ಗ ಹೈರಾಣಾಗಿದ್ದಾರೆ. ಮೋಡ ಕವಿದ ವಾತಾವರಣವಿದ್ದರೂ ಅಗತ್ಯ ಪ್ರಮಾಣದಲ್ಲಿ ಮಳೆಯಾಗದ ಕಾರಣ ರೈತರು ಚಿಂತಾಕ್ರಾAತರಾಗಿದ್ದಾರೆ. (ಕೆ.ಕೆ. ನಾಗರಾಜಶೆಟ್ಟಿ)