ಇಂಫಾಲ್, ಜು. ೩ : ಕಳೆದ ಮೇ ೩ ರಂದು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಲು ಮಣಿಪುರದ ೯ ಜಿಲ್ಲೆಗಳಲ್ಲಿ ಮತ್ತೊಂದು ಬುಡಕಟ್ಟು ಜನಾಂಗವಾದ ಕುಕಿಗಳು ಮತ್ತು ನಾಗಾಗಳು 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' (ಖಿಡಿibಚಿಟ Soಟiಜಚಿಡಿiಣಥಿ ಒಚಿಡಿಛಿh') ಆಯೋ ಜಿಸಿದ ನಂತರ ಈಶಾನ್ಯ ರಾಜ್ಯ ವಾದ ಮಣಿಪುರದಲ್ಲಿ ಹಿಂಸಾತ್ಮಕ ಘರ್ಷಣೆಗಳು ಪ್ರಾರಂಭವಾದವು, ಇದು ಮುಂದುವರೆದು ಇಂದಿಗೆ ನೂರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿ ನೇತೃ ತ್ವದ ಮಣಿಪುರ ಸರ್ಕಾರವು ಮೀಸಲು ಅರಣ್ಯಗಳಿಂದ ಬುಡ ಕಟ್ಟು ಗ್ರಾಮಸ್ಥರನ್ನು ಹೊರಹಾಕುವ ಕಾರ್ಯಾಚರಣೆಯನ್ನು ಪ್ರಾರಂ ಭಿಸಿದ ನಂತರ ಇಂಫಾಲ್ ಕಣಿವೆ ಮತ್ತು ಅದರ ಸುತ್ತಲಿನ ಬೆಟ್ಟಗಳ ನಡುವಿನ ಜನಾಂಗೀಯ ಗುಂಪುಗಳ ನಡುವಿನ ಪರಸ್ಪರ ಅನುಮಾನದ ಸುದೀರ್ಘ ಇತಿಹಾಸವು ಒಂದು ಘರ್ಷಣೆಯಾಗಿ ಮಾರ್ಪಟ್ಟಿತು. .
ಮಣಿಪುರದಲ್ಲಿ ಹಿಂಸಾಚಾರದ ಉಲ್ಬಣವು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ದಶಕಗಳ ಬೇಡಿಕೆ ಮೂಲವಾಗಿದೆ. ಈ ಹಿಂಸಾ ಚಾರಕ್ಕೆ ತಕ್ಷಣದ ಕಾರಣವೆಂದರೆ, ಮಣಿಪುರ ಹೈಕೋರ್ಟಿನ ಆದೇಶವು, ಮೇ ೨೯ ರೊಳಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಸಮು ದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನ ಮಾನಕ್ಕೆ ಒಪ್ಪಿಗೆ ಸೂಚಿಸಿದಂತೆ ಆಗಿದೆ. ಮಣಿಪುರವನ್ನು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿ ಸುವ ಮೊದಲು ಈ ಸಮುದಾಯವು ಒಮ್ಮೆ ಪರಿಶಿಷ್ಟ ಪಂಗಡದ ಸ್ಥಾನ ಮಾನ ಹೊಂದಿತ್ತು ಎಂದು ಅರ್ಜಿದಾರರು ಕೋರ್ಟಿನಲ್ಲಿ ವಾದಿಸಿ ದ್ದರು. ಸರ್ಕಾರವೂ ಈಗಾಗಲೇ ಮೈತೇಯಿಗಳಿಗೆ ಪರಿಶಿಷ್ಟ ಸ್ಥಾನಮಾನ ನೀಡಲು ಶಿಫಾರಸ್ಸು ಮಾಡಿದೆ. ಆದರೆ ಬುಡಕಟ್ಟು ಜನಾಂಗವು ಇದನ್ನು ತೀವ್ರವಾಗಿ ವಿರೋಧಿಸುತ್ತಿರುವುದೇ ಹಿಂಸೆಗೆ ಮೂಲ ಕಾರಣವಾಗಿದೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿ ರುವ ಬಿಜೆಪಿ ಸರ್ಕಾರ ಹಿಂಸೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಬಿಜೆಪಿಯ ಪ್ರಮುಖ ನಾಯಕರ ಮನೆಗಳನ್ನೇ ಬಂಡುಕೋರರು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅನೇಕ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮನೆಗಳನ್ನು ಸುಟ್ಟು ಹಾಕಲಾಗಿದೆ. ಪೊಲೀಸ್ ಠಾಣೆಗಳು, ಸರ್ಕಾರಿ ಕಚೇರಿಗಳ ಮೇಲೆ ಹಿಂಸಾನಿರತರು ಮುಗಿಬಿದ್ದು ಧ್ವಂಸ ಮಾಡುತ್ತಿದ್ದಾರೆ. ಕಳೆದ ವಾರ ರಾತ್ರಿ ಕೇಂದ್ರ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ರಂಜನ್ ಸಿಂಗ್ ಅವರ ಮನೆಗೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ಮಾಡಿ, ಬೆಂಕಿ ಹಚ್ಚಿದ್ದಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಮೈತೇಯಿ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ಈ ಸಂಘರ್ಷ ಪ್ರಕಟವಾಗಿ ಕಾಣಿಸಿ ಕೊಂಡಿದ್ದರೂ, ಇದರ ಕಾರಣಗಳು ದಶಕಗಳಿಂದಲೂ ಹೊಗೆಯಾಡು ತ್ತಿದ್ದವು. ಮೈತೇಯಿ ಜನಾಂಗದವರು ಹಾಗೂ ಬುಡಕಟ್ಟು ಸಮುದಾಯ ದವರಾದ ಕುಕೀಗಳು, ನಾಗಾಗಳು ಪರಸ್ಪರ ಹೊಡೆದಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಮೈತೇಯಿಗಳ ಪರ ನಿಂತಿದೆ. ಮೈತೇಯಿಗಳು ರಾಜ್ಯದ ಜನಸಂಖ್ಯೆಯ ಸುಮಾರು ೫೩ ಪ್ರತಿಶತದಷ್ಟು ಹಾಗೂ ಬುಡಕಟ್ಟು ಸಮುದಾಯದವರು ಶೇ.೪೦ರಷ್ಟು ಇದ್ದಾರೆ. ಆದರೆ ಬುಡಕಟ್ಟು ಸಮುದಾಯದವರು ೯೦ ಪ್ರತಿಶತದಷ್ಟು ಭೂಪ್ರದೇಶದಲ್ಲಿ ಹರಡಿದ್ದಾರೆ. ರಾಜ್ಯದ ಕೇವಲ ೧೦ ಪ್ರತಿಶತದಷ್ಟು ಜಾಗದಲ್ಲಿ ಮಾತ್ರ ಮೈತೇಯಿಗಳಿದ್ದರೂ ರಾಜಕೀಯ ವಾಗಿ ಬಲಿಷ್ಠರಾಗಿದ್ದಾರೆ. ಶಾಸನಸಭೆಗಳಲ್ಲಿ ಇವರ ಪ್ರಾತಿನಿಧ್ಯ ಹೆಚ್ಚಿದೆ. ಈಗ ಎರಡೂ ಸಮುದಾಯಗಳ ನಡುವೆ ದ್ವೇಷ ಭುಗಿಲೇಳಲು ಹಲವು ಕಾರಣಗಳಿವೆ.
ಕೆಲವು ವರ್ಷಗಳ ಹಿಂದಿನಿAದಲೇ, ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ ಇವರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಸಾರಿದ ಸರ್ಕಾರ, ಅವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ. ಹಲವು ಕಡೆ ಅರಣ್ಯ ಭೂಮಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ತಮ್ಮನ್ನು ತೆರವು ಮಾಡಲಾಗುತ್ತಿದೆ ಎಂಬುದು ಕುಕಿಗಳ ಹಾಗೂ ನಾಗಾಗಳ ಸಿಟ್ಟು. ರಾಜ್ಯ ಸರ್ಕಾರ ಮೈತೇಯಿಗಳನ್ನು ಓಲೈಸುತ್ತಿದೆ; ತಮ್ಮನ್ನು ಹಣಿಯುತ್ತಿದೆ ಎಂಬುದು ಇವರ ಆಕ್ರೋಶ. ಇದಕ್ಕೆ ಪೂರಕ ಎಂಬAತೆ, ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೇಯಿ ಬುಡಕಟ್ಟು ಬೇಡಿಕೆ ಸಲ್ಲಿಸಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ, ಕೇಂದ್ರಕ್ಕೆ ಶಿಫಾರಸು ಕಳುಹಿಸಿದೆ. ಮೈತೇಯಿಗಳಿಗೆ ಎಸ್‌ಟಿ ಸ್ಥಾನಮಾನ ನೀಡಿದರೆ ತಮ್ಮ ಅಸ್ತಿತ್ವಕ್ಕೆ, ಬದುಕುವ ಅವಕಾಶಗಳಿಗೆ ಧಕ್ಕೆ ಎಂಬುದು ಬುಡಕಟ್ಟು ಸಮುದಾಯಗಳ ಆತಂಕವಾಗಿದೆ. ಕುಕೀಗಳು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿAದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ವಲಸೆ ಬಂದಿದ್ದಾರೆ ಎಂಬುದು ಮೈತೇಯಿಗಳ ಆರೋಪ. ಹೀಗೆ ಎರಡೂ ಜನಾಂಗಗಳು ಪರಸ್ಪರ ಪ್ರತಿಭಟಿಸುತ್ತಿವೆ. ನಾಗಾ ಮತ್ತು ಕುಕಿ ಸಮುದಾಯಕ್ಕೆ ಮೊದಲಿನಿಂದಲೂ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಿದ್ದು ಇದೀಗ ಕೋರ್ಟು ಸೂಚನೆಯಂತೆ ಮೈತೇಯಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಲು ಹೊರಟಿದೆ.
ಈ ನಡುವೆ ಈ ಗಲಭೆಯಲ್ಲೂ ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಮುಂದಾಗಿವೆ. ವಿಪಕ್ಷಗಳು ಬಿಜೆಪಿ ವಿರುದ್ಧ ಆರೋಪಿಸುತ್ತಿವೆ. ಬಿಜೆಪಿ ವಿಪಕ್ಷಗಳು ಗಲಭೆಗೆ ಪ್ರಚೋದನೆ ನೀಡುತ್ತಿವೆ ಎಂದು ಆರೋಪಿಸಿದೆ.
೨೦೧೧ ರ ಜನಗಣತಿಯ ಪ್ರಕಾರ ಮಣಿಪುರದ ಒಟ್ಟು ಜನಸಂಖ್ಯೆ ಸುಮಾರು ೨೮.೫೬ ಲಕ್ಷ ಆಗಿದ್ದು ಇದರಲ್ಲಿ ಶೇಕಡಾ ೪೧.೨೬ ರಷ್ಟು ಪಾಲು ಹೊಂದಿರುವ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿರುವ ಬುಡಕಟ್ಟು ಸಮುದಾಯದವರ ಸಂಖ್ಯೆ ೧೧.೭೯ ಲಕ್ಷ ಆಗಿದ್ದು ಬಹುತೇಕ ಹಿಂದೂ ಧರ್ಮವನ್ನು ಪಾಲಿಸುವ ಮೈತೇಯಿಗಳ ಜನಸಂಖ್ಯೆ ೧೧.೯೦ ಲಕ್ಷ ಮತ್ತು ಶೇಕಡಾ ೪೧.೩೯ ಪಾಲನ್ನು ಹೊಂದಿದೆ. ಮುಸ್ಲಿಮರ ಸಂಖ್ಯೆ ಜನಸಂಖ್ಯೆಯ ಶೇಕಡಾ ೮.೪ ರಷ್ಟಿದ್ದು , ಮಣಿಪುರದ ೯ ಜಿಲ್ಲೆಗಳಲ್ಲಿ ಐದು ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯದವರು (ಕುಕಿ ಮತ್ತು ನಾಗಾಗಳು ) ಬಹುಸಂಖ್ಯಾತರಾಗಿದ್ದರೆ ನಾಲ್ಕು ಜಿಲ್ಲೆಗಳಲ್ಲಿ ಮೈತೇಯಿಗಳು ಬಹುಸಂಖ್ಯಾತರಾಗಿದ್ದಾರೆ.
ಎರಡೂ ಕಡೆಯವರನ್ನು ಒಂದುಗೂಡಿಸಿ ಮಾತುಕತೆಯ ವೇದಿಕೆಗೆ ತಂದು, ಸಮಾಧಾನಿಸುವ ಕೆಲಸವನ್ನು ಸರ್ಕಾರ ನಡೆಸುವವರು ಮಾಡಬೇಕಿದೆ. ಆದರೆ ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಸರ್ಕಾರ, ಮೈತೇಯಿಗಳ ಪರ ಇದೆ ಎಂದು ಬುಡಕಟ್ಟು ಸಮುದಾಯದವರು ಆರೋಪ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರಧಾನಿ ಸರ್ವಪಕ್ಷಗಳ ಸಭೆ ಕರೆದರೆ ಪ್ರಯೋಜನವಾಗಬಹುದು ಎಂದು ವಿಪಕ್ಷಗಳು ಆಗ್ರಹಿಸಿವೆ. ೨೦೦೧ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಡೆಸಿದ ಸರ್ವಪಕ್ಷ ಸಭೆ ಈ ವಿಷಯದಲ್ಲಿ ಶಮನ ತಂದಿತ್ತು. ಉದ್ವಿಗ್ನತೆ ಶಮನಕ್ಕೆ ಕೇಂದ್ರ ಮುಂದಾಗಬೇಕಿದೆ.
ಮಣಿಪುರದ ಮುಖ್ಯ ಮಂತ್ರಿ ಬೀರೆನ್ ಸಿಂಗ್ ಶುಕ್ರವಾರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಆದರೆ ಅವರ ಮನೆ ಎದುರು ಸೇರಿದ್ದ ಸಾವಿರಾರು ಬೆಂಬಲಿಗರ ಪೈಕಿ ಮಹಿಳೆಯೊಬ್ಬರು ಅದನ್ನು ಹರಿದು ಹಾಕಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ತಾವು ಈ ಸಂದಿಗ್ದ ಸಂದರ್ಭದಲ್ಲಿ ರಾಜೀನಾಮೆ ಕೊಡುವುದಿಲ್ಲ ಎಂದು ಬೀರೇನ್ ಸ್ಪಷ್ಟಪಡಿಸಿದ್ದಾರೆ. ಮಣಿಪುರದಲ್ಲಿ ರಾಷ್ಟçಪತಿ ಆಳ್ವಿಕೆಯ ಮಾತೂ ಕೇಳಿ ಬರುತ್ತಿದೆ. ಮುಂದಿನ ಜುಲೈ ೮ ರ ವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದೇನಾಗುವುದೋ ಕಾದು ನೋಡಬೇಕಿದೆ.
- ಕೋವರ್‌ಕೊಲ್ಲಿ ಇಂದ್ರೇಶ್