ಗೋಣಿಕೊಪ್ಪಲು, ಜು. ೩: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಹದಿಹರೆಯದ ಯುವಕ ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕನಾಗಿದ್ದ ಹಾತೂರು ಗ್ರಾಮದ ಕೆ.ಅಜಿತ್(೨೯) ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೂಲತಃ ಹಾತೂರು ಗ್ರಾಮದ ನಿವಾಸಿಯಾಗಿದ್ದ ಅಜಿತ್ ಕಳೆದ ೫ ವರ್ಷಗಳಿಂದ ಖಾಸಗಿ ಬಸ್‌ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ತಾ. ೨ರಂದು ಎಂದಿನAತೆ ತನ್ನ ಕರ್ತವ್ಯ ಮುಗಿಸಿದ ನಂತರ ರಾತ್ರಿ ೯.೩೦ರ ಸುಮಾರಿಗೆ ಬಸ್ ನಿಲ್ದಾಣ ಸಮೀಪವಿರುವ ಒಣಮೀನು ಮಾರ್ಕೆಟ್ ಬಳಿ ತೆರಳಿ ಅಲ್ಲಿಯೇ ವಿಷ ಸೇವಿಸಿದ್ದಾನೆ.

ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಖಾಸಗಿ ಬಸ್ ಚಾಲಕರ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸ್ಥಳಕ್ಕೆ ತೆರಳಿ ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಜಿತ್‌ನನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಜಿತ್ ಮೃತಪಟ್ಟಿದ್ದಾನೆ. ಇಂದು ಸಂಜೆ ವೇಳೆ ಮೈಸೂರು ಆಸ್ಪತ್ರೆಯಿಂದ ಮೃತ ದೇಹವನ್ನು ಗೋಣಿಕೊಪ್ಪಕ್ಕೆ ತರಲಾಯಿತು. ಈ ವೇಳೆ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಖಾಸಗಿ ಬಸ್ ಚಾಲಕರ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ನಾಗರಿಕರು ಸಂತಾಪ ಸೂಚಿಸಿದರು. ಮೃತ ವ್ಯಕ್ತಿಯು ಅವಿವಾಹಿತನಾಗಿದ್ದ.