ಸಿದ್ದಾಪುರ, ಜು. ೩: ಸಿದ್ದಾಪುರ ಗ್ರಾ.ಪಂ ಪಟ್ಟಣದ ಕೊಳಚೆ ನೀರುಗಳನ್ನು ಚರಂಡಿ ಮೂಲಕ ಹರಿಯ ಬಿಡುತ್ತಿದ್ದು ವ್ಯಾಪ್ತಿಯ ಗದ್ದೆಗಳಿಗೆ ಸೇರುತ್ತಿದ್ದು, ಇದರ ವಿರುದ್ಧ ರಾಜ್ಯ ರೈತ ಸಂಘ ಹೋರಾಟ ಮಾಡಲು ನಿರ್ಧರಿಸಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದಾಪುರದ ಮೈಸೂರು ರಸ್ತೆ ಬಳಿಯ ಸ್ವರ್ಣಮಾಲಾ ಕಲ್ಯಾಣ ಮಂಟಪದ ಬಳಿ ಇರುವ ಸಾರ್ವಜನಿಕ ಚರಂಡಿಯ ಮೂಲಕ ಪಟ್ಟಣದಿಂದ ಹಾಗೂ ಮಾರುಕಟ್ಟೆ ಭಾಗದ ಕೊಳಚೆ ನೀರು ಹಾಗೂ ತ್ಯಾಜ್ಯಗಳನ್ನು ಹರಿಯ ಬಿಡಲಾಗುತ್ತಿದೆ ಎಂದು ರೈತಸಂಘದ ಸದಸ್ಯ ಮಂಡೇಪAಡ ಸಿ ಪೊನ್ನಪ್ಪ ರೈತ ಸಂಘಕ್ಕೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಸಿದ್ದಾಪುರ ಗ್ರಾ.ಪಂ. ಗ್ರಾಮದ ಕೊಳಚೆ ನೀರನ್ನು ಸಾರ್ವಜನಿಕ ಚರಂಡಿ ಮೂಲಕ ಹರಿಯಬಿಡುತ್ತಿದ್ದು, ಮುಲ್ಲತೋಡು ಬಳಿಸೇರುತ್ತಿದೆ. ಅಲ್ಲದೆ ಆ ಭಾಗದ ರೈತರ ಗದ್ದೆಗಳಲ್ಲಿ ನೀರು ನಿಂತು ಭತ್ತದ ಕೃಷಿ ಮಾಡುಲು ಸಾಧ್ಯವಾಗುತ್ತಿಲ್ಲ ಎಂದು ಎಂ ಸಿ ಪೊನ್ನಪ್ಪ ರೈತ ಸಂಘದ ವಾರ್ಷಿಕ ಸಭೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ಪದಾಧಿಕಾರಿಗಳಿಗೆ ವಾಸ್ತವ ಮನದಟ್ಟಾಗಿದೆ. ಕೊಳಚೆ ನೀರು ಕೃಷಿಗದ್ದೆಗಳಲ್ಲಿ ನಿಂತು ಸಮಸ್ಯೆಯಾಗಿದೆ. ಕೂಡಲೇ ಗ್ರಾ.ಪಂ. ಗದ್ದೆಗಳಿಗೆ ಕೊಳಚೆ ನೀರು ಹೋಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ತಪ್ಪಿದಲ್ಲಿ ರೈತ ಸಂಘದ ವತಿಯಿಂದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ಕುರಿತು ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗುವುದೆಂದರು. ಈ ಸಂದರ್ಭ ರೈತ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಬೋಪಯ್ಯ, ಸುಜಯ್ ಬೋಪಯ್ಯ, ಬಿ. ಹೇಮಚಂದ್ರ, ಟಿ.ಜಿ. ಚಂದ್ರಶೇಖರ್, ಎನ್. ಚಂದ್ರಕುಮಾರ್ ಇನ್ನಿತರರು ಹಾಜರಿದ್ದರು.