ಭ್ರಷ್ಟಾಚಾರ ನಿರ್ಮೂಲನೆ, ಹಸಿವು ಮುಕ್ತ ಕರ್ನಾಟಕ ಸರ್ಕಾರದ ಆದ್ಯತೆ: ರಾಜ್ಯಪಾಲ ಗೆಹ್ಲೋಟ್
ಬೆಂಗಳೂರು, ಜು. ೩: ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ , ಬಸವಣ್ಣನ ತತ್ವದಡಿ ರಾಜ್ಯ ಸರ್ಕಾರ ನಡೆಯುತ್ತಿದೆ. ಸರ್ಕಾರ ಎಲ್ಲಾ ಸಮುದಾಯಗಳ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಭ್ರಷ್ಟಾಚಾರವೆಂಬ ಪಿಡುಗು ಬಹುತೇಕ ಸಾಂಸ್ಥಿಕೀಕರಣಗೊAಡಿದೆ. ಭ್ರಷ್ಟಾಚಾರದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಆಡಳಿತಾತ್ಮಕ ಮತ್ತು ಶಾಸಕಾಂಗ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರವು ಜನಕೇಂದ್ರಿತ ಆರ್ಥಿಕತೆಗೆ ಒತ್ತು ನೀಡಲಿದೆ. ದೇಶದ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿರುವ ಕರ್ನಾಟಕ ರಾಜ್ಯ ಇಂದು ಆರ್ಥಿಕ ಮುಗ್ಗಟ್ಟಿನ ಸ್ಥಿತಿಗೆ ತಲುಪಿದೆ. ಕರ್ನಾಟಕ ರಾಜ್ಯವನ್ನು ಆರ್ಥಿಕ ಸಂಕಷ್ಟದಿAದ ಹೊರತರುವುದು ನೂತನ ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಿದೆ ಎಂದು ಗೆಹ್ಲೋಟ್ ಹೇಳಿದರು. ಸಂಕುಚಿತ ಮನಸ್ಸುಗಳು ವಿವಿಧ ಸಮುದಾಯಗಳ ನಡುವೆ ಒಡಕು ಮತ್ತು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತವೆ. ಅಂತಹ ಮನಃಸ್ಥಿತಿಯ ಜನರು ಸಮಾಜದ ವಿವಿಧ ಹಂತಗಳಲ್ಲಿ ಇನ್ನೂ ಉಳಿದಿದ್ದಾರೆ ಎಂದು ಭಾಷಣದಲ್ಲಿ ಹೇಳಿದ ರಾಜ್ಯಪಾಲರು, ಶಾಂತಿಯುತ ಮತ್ತು ಪರಸ್ಪರ ಪ್ರೀತಿಸುವ ಸಮಾಜವನ್ನು ನಿರ್ಮಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ವಿಪಕ್ಷದ ನಾಯಕರ ಅನುಪಸ್ಥಿತಿ: ಕರ್ನಾಟಕ ವಿಧಾನ ಮಂಡಲ ಅಧಿವೇಶನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನ ಸಭೆ ಪ್ರತಿಪಕ್ಷ ನಾಯಕನಿಲ್ಲದೆ ಕಲಾಪ ನಡೆಯುತ್ತಿದೆ. ಪ್ರಮುಖ ವಿರೋಧ ಪಕ್ಷ ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ವಿಪಕ್ಷ ನಾಯಕನ ಆಯ್ಕೆಗೆ ದೆಹಲಿ ಬಿಜೆಪಿಯಿಂದ ವೀಕ್ಷಕನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.
ನಮ್ಮ ರಾಜ್ಯದಲ್ಲಿ ಯಾವ ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ: ಹೆಚ್.ಡಿ.ಕೆ. ಲೇವಡಿ
ಬೆಂಗಳೂರು, ಜು. ೩: ಮಹಾರಾಷ್ಟçದಲ್ಲಿ ದಿಢೀರ್ ರಾಜಕೀಯ ಬದಲಾವಣೆ ನೋಡಿ ಶಾಕ್ ಆಗಿದೆ. ನಮ್ಮ ರಾಜ್ಯದಲ್ಲಿ ಯಾವ ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಯವರು ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ ಅಂತಾರೆ. ಮಹಾರಾಷ್ಟ್ರದಲ್ಲಿ ದಿಢೀರ್ ರಾಜಕೀಯ ಬದಲಾವಣೆಯಾಗಿದೆ. ನಿನ್ನೆ ಅಜಿತ್ ಪವಾರ್ ಮಹಾರಾಷ್ಟ್ರ ಸರ್ಕಾರ ಬೆಂಬಲಿಸಿದ್ದಾರೆ. ಕರ್ನಾಟಕದಲ್ಲಿ ಯಾವ ಅಜಿತ್ ಪವಾರ್ ಬರುತ್ತಾರೋ ಗೊತ್ತಿಲ್ಲ. ಕರ್ನಾಟಕದ ಬಗ್ಗೆಯೂ ನನಗೆ ಆತಂಕ ಶುರುವಾಗಿದೆ ಎಂದರು. ಇದೇ ವೇಳೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಮಾಜಿ ಸಿಎಂ, ಮುಖ್ಯಮಂತ್ರಿ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಾಸಕರ ಶಿಫಾರಸ್ಸು ತಂದರೇ ಸಾಲದು ೩೦ ಲಕ್ಷ ದುಡ್ಡು ತನ್ನಿ ಎಂದು ಹೇಳುತ್ತಿದ್ದಾರೆ. ದುಡ್ಡು ಕೊಟ್ಟಿರುವವರು ಸಾಕ್ಷಿ ಕೊಡುತ್ತ್ತಾರಾ? ದುಡ್ಡು ಕೊಟ್ಟವರಿಗೆ ಕೆಲಸ ಆಗಬೇಕು ಹಾಗಾಗಿ ಯಾರು ಸಾಕ್ಷಿ ಕೊಡಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸಭಾ ನಾಯಕರಾಗಿ ಬೋಸರಾಜು
ಬೆಂಗಳೂರು, ಜು. ೩: ವಿಧಾನಪರಿಷತ್ ಸದಸ್ಯರಾಗಿ ಇಂದು ಅಧಿಕಾರ ಸ್ವೀಕರಿಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎನ್.ಎಸ್. ಬೋಸರಾಜು ಅವರನ್ನು ವಿಧಾನಪರಿಷತ್ನ ಕಾಂಗ್ರೆಸ್ ಪಕ್ಷದ ಸಭಾ ನಾಯಕರನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮನಿರ್ದೇಶನ ಮಾಡಿದ್ದಾರೆ.
ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಆಸ್ತಿ ಜಪ್ತಿಗೆ ಎನ್ಐಎ ಸಜ್ಜು
ಬೆಂಗಳೂರು, ಜು. ೩: ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಶರಣಾಗದ ಹಿನ್ನೆಲೆಯಲ್ಲಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಸಿದ್ಧವಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಆರೋಪಿಗಳ ಶರಣಾಗತಿಗೆ ಜೂನ್ ೩೦ರವರೆಗೆ ಗಡುವು ನೀಡಲಾಗಿತ್ತು. ಈ ಬಗ್ಗೆ ಸುಳ್ಯ ಮತ್ತು ಬೆಳ್ಳಾರೆ ಪಟ್ಟಣಗಳಲ್ಲಿ ಏಜೆನ್ಸಿ ಅಧಿಕಾರಿಗಳು ಮೈಕ್ ಮೂಲಕ ಘೋಷಣೆ ಮಾಡಿದ್ದರು. ಆರೋಪಿಗಳ ನಿವಾಸಗಳಿಗೆ ನೋಟೀಸ್ ಅಂಟಿಸಿ, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದವರಿಗೆ ನಗದು ಬಹುಮಾನದ ಘೋಷಣೆಯನ್ನೂ ಅಧಿಕಾರಿಗಳು ಮಾಡಿದ್ದಾರೆ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಲ್ಲು ಮುಟ್ಲು ನಿವಾಸಿಗಳಾದ ಉಮರ್ ಫಾರೂಕ್ ಮತ್ತು ಮುಸ್ತಫಾ ಪೈಚಾರ್ ಅವರಿಗಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಎನ್ಐಎ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರೂ, ಇಲ್ಲಿಯವರೆಗೆ ಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಎನ್ಐಎ ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಕಂದಾಯ ಇಲಾಖೆ ಮತ್ತು ಇತರ ಮೂಲಗಳಿಂದ ಸಂಗ್ರಹಿಸುತ್ತಿದೆ. ಅಧಿಕೃತ ಬ್ಯಾಂಕ್ ಖಾತೆಗಳ ವಿವರಗಳನ್ನು ಸಹ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಎನ್ಐಎ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ನಂತರ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ.
ಚಾಕುವಿನಿಂದ ಇರಿದು ಪಿಯುಸಿ ವಿದ್ಯಾರ್ಥಿ ಹತ್ಯೆ
ಬೆಂಗಳೂರು, ಜು. ೩: ಬೆಂಗಳೂರಿನ ಮಂಜುನಾಥ್ ನಗರದ ಗೌತಮ್ ಕಾಲೇಜು ಬಳಿ ಪ್ರಥಮ ಪಿಯುಸಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ. ಹತ್ಯೆಯಾದ ವಿದ್ಯಾರ್ಥಿಯನ್ನು ಸುಹೇಲ್ (೧೮) ಎಂದು ಗುರುತಿಸಲಾಗಿದ್ದು, ಗೌತಮ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಸುಹೇಲ್ ಹಾಗೂ ಇತರ ವಿದ್ಯಾರ್ಥಿಗಳ ನಡುವೆ ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ತೀವ್ರವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸುಹೇಲ್ನನ್ನು ಕೂಡಲೇ ಸಮೀಪದ ಕಾಡೆ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬಸವೇಶ್ವರನಗರ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.