ಕುಶಾಲನಗರ, ಜು. ೨: ಕೊಡಗು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ ೩೦ ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ವೇದಿಕೆಯ ಜಿಲ್ಲಾಧ್ಯಕ್ಷರಾದ ಅಭಿಮನ್ಯು ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ಸಾಲಿನ ವನಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ವೇದಿಕೆಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸೋಮವಾರಪೇಟೆ, ವೀರಾಜಪೇಟೆ, ಮಡಿಕೇರಿ, ಪಿರಿಯಾಪಟ್ಟಣ ಬೆಟ್ಟದಪುರ ಅರಕಲಗೂಡು ವ್ಯಾಪ್ತಿಯಲ್ಲಿ ತಲಾ ಐದು ಸಾವಿರ ಗಿಡಗಳನ್ನು ನೆಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವೇದಿಕೆಯ ಉಡುಪಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಸುತ್ತೋಲೆ ಬಗ್ಗೆ ವಿವರ ಒದಗಿಸಿದರು.
ಕುಶಾಲನಗರದ ಜಿಲ್ಲಾ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಜನ ಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ತಾಲೂಕು ಯೋಜನಾಧಿಕಾರಿಗಳಿಂದ ೨೦೨೨-೨೩ ನೇ ಸಾಲಿನ ಸಾಧನ ವರದಿ ಮಂಡಿಸಲಾಯಿತು. ವೇದಿಕೆಯ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಯೋಜನೆಯ ಕಾರ್ಡ್ ವಿತರಿಸಲಾಯಿತು. ಈ ಸಾಲಿನಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಲಾಯಿತು.
ಈ ಸಂದರ್ಭ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ಅರುಣ್ ಬಾನಂಗಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಹಾಗೂ ವೇದಿಕೆ ಕಾರ್ಯದರ್ಶಿ ಲೀಲಾವತಿ, ವೇದಿಕೆಯ ತಾಲೂಕು ಉಪಾಧ್ಯಕ್ಷರುಗಳು, ಸದಸ್ಯರು, ಯೋಜನಾಧಿಕಾರಿಗಳು ಇದ್ದರು.