ಕುಶಾಲನಗರ, ಜೂ. ೩೦: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಸಂಘ ಕೊಡಗು ಶಾಖೆ ವತಿಯಿಂದ ಸರ್ಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಾಗೂ ಶೇ.ನೂರು ಫಲಿತಾಂಶ ಪಡೆದ ಕಾಲೇಜುಗಳ ಪ್ರಾಂಶುಪಾಲರಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು. ಕಾಲೇಜಿನ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಸಂಘದ ಅಧ್ಯಕ್ಷ ಫಿಲಿಪ್ ವಾಸ್ ಮಾತನಾಡಿ, ರಾಜ್ಯದಲ್ಲಿ ಪಿಯುಸಿ ಫಲಿತಾಂಶದಲ್ಲಿ ಕೊಡಗು ಜಿಲ್ಲೆ ಮೂರನೇ ಸ್ಥಾನ ಪಡೆದುಕೊಂಡಿದೆ. ಉಪನ್ಯಾಸಕರ ಕೊರತೆಯ ನಡುವೆಯೂ ಉತ್ತಮ ಫಲಿತಾಂಶ ತರುವಲ್ಲಿ ಶ್ರಮಿಸಿದ್ದೇವೆ ಎಂದರು. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿ ಜೀವನವು ಅಮೂಲ್ಯ ವಾಗಿದ್ದು, ನಿತ್ಯ ಪರಿಶ್ರಮ, ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದಾಗ ವಿಶಿಷ್ಟ ಸಾಧನೆ ಮಾಡಲು ಸಾಧ್ಯ. ಹೆತ್ತವರು ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಭಾರ ನಾಗೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಕೆ.ಜಿ. ಅಶ್ವಿನಿ ಕುಮಾರ್, ಪ್ರಧಾನ ಕಾರ್ಯದರ್ಶಿ ಹಂಡ್ರAಗಿ ನಾಗರಾಜು, ಖಜಾಂಚಿ ಉಮೇಶ್ ಕುಮಾರ್, ಸಹ ಕಾರ್ಯದರ್ಶಿ ತಿಲೋತ್ತಮೆ, ವೀರಾಜಪೇಟೆ ತಾಲೂಕು ಅಧ್ಯಕ್ಷ ಸರ್ವೋತ್ತಮ, ಸಂಘದ ಮುಖಂಡ ನಾಗಪ್ಪ ಯಾಲಕ್ಕಿಕಟ್ಟೆ, ವಿವಿಧ ಕಾಲೇಜುಗಳ ಉಪನ್ಯಾಸಕರು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಶೇ.ನೂರು ಫಲಿತಾಂಶ ಪಡೆದ ಕಾಲೇಜುಗಳ ಪ್ರಾಂಶುಪಾಲರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಜೀ ಕನ್ನಡ ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು.