ಶೇ.೯ ಡಿವಿಡೆಂಡ್ ನೀಡಲು ನಿರ್ಧಾರ
ಕೊಡ್ಲಿಪೇಟೆ, ಜೂ. ೩೦: ಇಲ್ಲಿನ ಕಾಮಧೇನು ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸ್ಥಳೀಯ ಚೌಡೇಶ್ವರಿ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಕೆ.ಕೆ. ರೇಣುಕಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ರೇಣುಕಾ ಅವರು, ಸಂಘ ರಚನೆಯಾಗಿ ಕೆಲವೇ ವರ್ಷಗಳಾಗಿದ್ದು ಸದಸ್ಯರುಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸರಕಾರದ ನೆರವಿನೊಂದಿಗೆ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಸಂಘವು ರೂ. ೨.೫೧ ಲಕ್ಷ ಲಾಭ ಗಳಿಸಿರುವುದರಿಂದ ಸರ್ವ ಸದಸ್ಯರುಗಳಿಗೆ ಶೇ. ೯ ಡಿವಿಡೆಂಡ್ ಹಂಚಿಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಪಿ. ಕೃಷ್ಣಮೂರ್ತಿ ಅವರು ಹಿಂದಿನ ಸಾಲಿನ ವಾರ್ಷಿಕ ಸಭೆಯ ನಡಾವಳಿ ಹಾಗೂ ಆಯವ್ಯಯ ಮಂಡಿಸಿದರು. ಉಪಾಧ್ಯಕ್ಷ ಕೆ.ಹೆಚ್. ಅಲ್ತಾಫ್ ಹುಸೇನ್, ನಿರ್ದೇಶಕರುಗಳಾದ ಹೆಚ್.ಎಂ. ದಿವಾಕರ್, ಕೆ.ಜಿ. ಕುಮಾರಸ್ವಾಮಿ, ಎ.ಆರ್. ಚಂದ್ರಶೆಟ್ಟಿ, ಕೆ.ಎಸ್. ಸುದೀಂದ್ರ ಕುಮಾರ್, ಡಿ.ಹೆಚ್. ರಮೇಶ್, ಎ.ಎಂ. ಕುಮಾರಸ್ವಾಮಿ, ಎಸ್.ಎಸ್. ರಮೇಶ್, ಬಿ.ಕೆ. ರಂಜಿತಾ ಉಪಸ್ಥಿತರಿದ್ದರು.