ಕೊಡ್ಲಿಪೇಟೆ, ಜೂ. ೨೮: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಶೇ. ೫ರ ಪಂಚಾಯಿತಿ ನಿಧಿಯಡಿ ವಿಶೇಷಚೇತನ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲೀನಾ ಪರಮೇಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷಚೇತನರ ಕಲ್ಯಾಣ ಇಲಾಖೆಯಲ್ಲಿ ನೋಂದಾಯಿಸಿ, ಇಲಾಖೆಯ ಗುರುತಿನ ಚೀಟಿ ಹೊಂದಿರುವ ೨೮ ಅರ್ಹ ಫಲಾನುಭವಿಗಳಿಗೆ ನೀರು ಶೇಖರಿಸಿಕೊಳ್ಳುವ ಉತ್ತಮ ಗುಣಮಟ್ಟದ ಟ್ಯಾಂಕ್ಗಳನ್ನು ವಿತರಿಸಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೇಣುಕಾ ಮೇದಪ್ಪ, ಸದಸ್ಯರುಗಳಾದ ಹನೀಫ್, ಮೋಕ್ಷಿಕ್ ರಾಜ್, ಪಾವನ ಗಗನ್, ವಿನೋದ ಆನಂದ್, ದಾಕ್ಷಾಯಿಣಿ ಕಾಂತರಾಜ್, ದಿನೇಶ್ ಕುಮಾರ್, ದೊಡ್ಡಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಕಾರ್ಯದರ್ಶಿ ಅಶ್ವಥ್, ನೌಕರರಾದ ಸಚಿನ್, ರಾಜೇಶ್, ರಂಜಿತಾ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ದಿಲೀಪ್, ಸಿಬ್ಬಂದಿಗಳಾದ ಧರ್ಮ, ತೀರ್ಥ, ಜೀವನ್ ಇತರರು ಹಾಜರಿದ್ದರು.