ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನಾದರೂ ತ್ಯಾಗ ಮಾಡಲು ಮನುಷ್ಯ ಸಿದ್ಧನಿರಬೇಕೆಂಬುದೇ ಈದುಲ್ ಅಝ್‌ಹಾ ಎಂಬ ಬಕ್ರೀದ್ ಹಬ್ಬದ ಸಂದೇಶ.

ಮಕ್ಕಾದ ಪವಿತ್ರ ಹಜ್‌ನಲ್ಲಿ ಬಡವನಿಗೊಂದು, ಶ್ರೀಮಂತನಿಗೊAದು ಡ್ರೆಸ್‌ಕೋಡ್ ಇಲ್ಲ. ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನಗಳ ವ್ಯತ್ಯಾಸಗಳಿಲ್ಲದೆ ಎಲ್ಲರೂ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕ ದೇವ ವಿಶ್ವಾಸದ ಶ್ಲೋಕ ಜಪಿಸುತ್ತಾರೆ.

ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಬಾಳಬೇಕೆಂಬ ಸಂದೇಶವನ್ನು ಸಾರುತ್ತಾರೆ.

ಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್ ಕರ್ಮದಲ್ಲಿ ತೊಡಗಿಕೊಳ್ಳುವಾಗ ಜಾಗತಿಕ ಮಟ್ಟದಲ್ಲಿ ಮುಸ್ಲಿಮರು ಈದ್ ಆಚರಿಸುತ್ತಾರೆ. ಪ್ರವಾದಿಗಳಲ್ಲೊಬ್ಬರಾದ ಇಬ್ರಾಹಿಂ (ಅ. ಸ.) ಹಾಗೂ ಅವರ ಪುತ್ರ ಇಸ್ಮಾಯಿಲ್ (ಅ. ಸ) ರ ದೇವನಿಷ್ಠೆ ಹಾಗೂ ತ್ಯಾಗೋಜ್ವಲ ಜೀವನದ ಸ್ಮರಣೆಯಾಗಿದೆ ಈದುಲ್ ಅಝ್ಹಾ. ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನಾದರೂ ತ್ಯಾಗ ಮಾಡಲು ಮನುಷ್ಯ ಸಿದ್ಧನಿರಬೇಕೆಂಬುದೇ ಈ ಹಬ್ಬದ ಸಂದೇಶ.

ಸತ್ಯ ವಿಶ್ವಾಸಿಯು ಜೀವನದಲ್ಲಿ ಪಾಲಿಸಬೇಕಾದ ೫ ಕಡ್ಡಾಯ ಕಾರ್ಯಗಳಲ್ಲಿ ಹಜ್ ಕೂಡಾ ಒಂದು. ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್ಹಜ್‌ನ ೯ನೇ ದಿನ ಮಕ್ಕಾದ ‘ಅರಫಾ’ ಎಂಬ ಬೃಹತ್ ಮೈದಾನದಲ್ಲಿ ಲಕ್ಷಾಂತರ ಮಂದಿ ಹಜ್‌ಗಾಗಿ ಒಂದುಗೂಡುತ್ತಾರೆ. ಅದೇ ದಿನ ಜಗತ್ತಿನೆಲ್ಲೆಡೆ ಮುಸ್ಲಿಮರು ಉಪವಾಸ ಕೈಗೊಂಡು, ಈ ತಿಂಗಳ ೧೦ ರಂದು ಅಂದರೆ ಇಂದು ಹಬ್ಬ ಆಚರಿಸುತ್ತಾರೆ. ಮಕ್ಕಾದಲ್ಲಿರುವ ಹಜ್ ಯಾತ್ರಿಕರು ಅರಫಾ ಮೈದಾನದಲ್ಲಿ ಒಗ್ಗೂಡಿ ಒಕ್ಕೊರಲಿನಿಂದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾರೆ. ಬಡವ ಶ್ರೀಮಂತನೆAಬ ಭೇದಭಾವವಿಲ್ಲದೇ ಏಕತೆ, ಸಮಾನತೆಯನ್ನು ಜಗತ್ತಿಗೆ ಸಾರುತ್ತಾರೆ. ಜಗತ್ತಿನ ಶಾಂತಿಗಾಗಿ ಎಲ್ಲರ ಸುಖ, ಸುಭಿಕ್ಷೆಗಾಗಿ ಪ್ರಾರ್ಥಿಸುತ್ತಾರೆ.

ಹಬ್ಬದ ದಿನ ಸೂರ್ಯೋದಯದ ಬಳಿಕ ವಿಶೇಷ ಸಾಮೂಹಿಕ ನಮಾಜ್ ಕೂಡ ನಡೆಯುತ್ತದೆ. ಪರಸ್ಪರ ಶುಭ ಹಾರೈಕೆ, ಹಸ್ತಲಾಘವ, ಆಲಿಂಗನ, ನೆರೆಹೊರೆ-ಕುಟುಂಬ ಸಂದರ್ಶನದ ಮೂಲಕ ಹಬ್ಬದ ದಿನವನ್ನು ಅವಿಸ್ಮರಣೀಯಗೊಳಿಸುತ್ತಾರೆ.

ಸಹೋದರತೆಯ ಸಂದೇಶ

ಹಜ್‌ಗಾಗಿ ವಿಶ್ವದ ನಾನಾ ದಿಕ್ಕುಗಳಿಂದ ಬಂದು ಅರಫಾದಲ್ಲಿ ಒಂದುಗೂಡುವ ಜನರ ವಿಶೇಷತೆ ಏನೆಂದರೆ ಎಲ್ಲರೂ ಶುಭ್ರ ಶ್ವೇತ ವಸ್ತçವನ್ನಷ್ಟೇ ಧರಿಸುವುದು. ಅಲ್ಲಿ ಬಡವನಿಗೊಂದು, ಶ್ರೀಮಂತನಿಗೊAದು ಡ್ರೆಸ್‌ಕೋಡ್ ಇಲ್ಲ. ವರ್ಗ, ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನ, ಪದವಿ ಇತ್ಯಾದಿಗಳ ಯಾವುದೇ ವ್ಯತ್ಯಾಸಗಳಿಲ್ಲದೆ ಬಡವ, ಶ್ರೀಮಂತನೂ, ನಿರ್ಗತಿಕನೂ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕದೈವ ವಿಶ್ವಾಸದ ಶ್ಲೋಕಗಳನ್ನು ಜಪಿಸುತ್ತಾರೆ. ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಮನುಷ್ಯರೆಲ್ಲರೂ ಸಹೋದರರು ಮತ್ತು ಸಮಾನರು ಎಂಬ ಸಂದೇಶವನ್ನು ಜಗತ್ತಿಗೆ ಸಾರಲಾಗುತ್ತದೆ.

ಕುರಿ ಬಲಿ ಏಕೆ ?

ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್‌ರನ್ನೆ ದೇವನಿಗೆ ಬಲಿಯರ್ಪಿಸಲು ಮುಂದಾಗುವ ರೋಚಕ ಘಟನೆಯೇ ಬಲಿದಾನ ಅಥವಾ ಕುರ್ಬಾನಿಯ ಹಿಂದಿರುವ ಇತಿಹಾಸ. ಸುದೀರ್ಘ ಕಾಲದ ಬಳಿಕ ಜನಿಸಿದ ಮಗ ಇಸ್ಮಾಯಿಲ್ ಜೊತೆ ಸಂತೋಷಭರಿತ ಜೀವನವನ್ನು ನಡೆಸುತ್ತಿದ್ದ ಇಬ್ರಾಹಿಮರಿಗೆ ಬೀಳುತ್ತದೆ. ಮಗನನ್ನು ಬಲಿಯರ್ಪಿಸು ಎಂಬ ಕನಸು ಬೀಳುತ್ತದೆ. ದೇವಾಜ್ಞೆಯನ್ನು ತಪ್ಪದೆ ಪಾಲಿಸುವ ಇಬ್ರಾಹಿಂ ಅವರು. ಪುತ್ರನನ್ನೆ ಬಲಿಯರ್ಪಿಸಲು ಮುಂದಾಗುತ್ತಾರೆ. ಆದರೆ ಅಲ್ಲಾಹನಿಗೆ ಬೇಕಿದ್ದದ್ದು ಪ್ರವಾದಿ ಇಬ್ರಾಹಿಮರ ದೇವನಿಷ್ಠೆ ಮಾತ್ರವಾಗಿತ್ತು. ಅದಕ್ಕಾಗಿಯೇ ಆಡೊಂದನ್ನು ಇಬ್ರಾಹಿಮರಿಗೆ ನೀಡುವ ಅಲ್ಲಾಹನು, ಅದನ್ನೆ ಬಲಿಯರ್ಪಿಸಲು ಆದೇಶಿಸುತ್ತಾನೆ.

ಬಕ್ರೀದ್ ಸಂದರ್ಭ ಜಗತ್ತಿನ ಎಲ್ಲೆಡೆ ನೀಡಲಾಗುವ ಪ್ರಾಣಿ ಬಲಿಯು ಇಬ್ರಾಹಿಂ ಮತ್ತವರ ಪುತ್ರನ ತ್ಯಾಗದ ಸಂದೇಶವನ್ನಷ್ಟೇ ಸಾರುತ್ತದೆ. ‘ಅವುಗಳ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು ಧರ್ಮನಿಷ್ಠೆ ಮಾತ್ರ’ ಎಂದು ಕುರ್‌ಆನ್ ಸ್ಪಷ್ಟವಾಗಿ ಹೇಳುತ್ತದೆ. ಇದನ್ನೇ ಅನುಸರಿಸಿ ತ್ಯಾಗದ ಸಂಕೇತವಾಗಿ ಮುಸ್ಲಿಮರು ಬಕ್ರೀದ್ ದಿನ ಪ್ರಾಣಿ ಬಲಿ ನೀಡುತ್ತಾರೆ.

ಬಲಿ ನೀಡಲಾದ ಪ್ರಾಣಿಯ ಮಾಂಸವನ್ನು ಮೂರು ಪಾಲುಗಳಾಗಿಸಿ, ಒಂದನ್ನು, ಬಲಿ ಕೊಟ್ಟವರ ಕುಟುಂಬದವರಿಗೆ, ಇನ್ನೊಂದನ್ನು ಬಂಧು-ಮಿತ್ರರಿಗೆ ಮತ್ತು ಮೂರನೆಯದನ್ನು ಬಡವರಿಗೆ ಹಂಚಲಾಗುತ್ತದೆ. ಹಬ್ಬವು ಉಳ್ಳವರ ಮನೆಯ ಸಂಭ್ರಮ ಮಾತ್ರವಾಗದೆ ಬಡವನ ಮನೆಯ ಒಲೆಯೂ ಉರಿಯಬೇಕೆಂಬುದೇ ಇದರ ಉದ್ದೇಶ. ಹಂಚಿ ತಿನ್ನಬೇಕೆಂಬ ಪಾಠ ಇಲ್ಲಿ ಅನಾವರಣಗೊಳ್ಳುತ್ತದೆ.

ಸಮಾನತೆಯ ಸಂದೇಶ ದಿನ

ಆಧುನಿಕ ಮಾನವ ಮಂಗಳನ ಅಂಗಳಕ್ಕೆ ಮುಟ್ಟಿದ್ದರೂ ಇಂದಿಗೂ ಶ್ರೇಷ್ಠ-ಕನಿಷ್ಟ, ಕರಿಯ-ಬಿಳಿಯ, ಸವರ್ಣೀಯ-ಅವರ್ಣೀಯ ಮನೋಭಾವದಿಂದ ಮುಕ್ತವಾಗಿಲ್ಲ. ಆದರೆ ಪ್ರವಾದಿ ಮುಹಮ್ಮದರು ೬ನೇ ಶತಮಾನದಲ್ಲಿಯೇ ಈ ಪದ್ಧತಿಯ ವಿರುದ್ಧ ಸಮರ ಸಾರಿದ್ದರು. ತಮ್ಮ ಅಂತಿಮ ವಿದಾಯ ಭಾಷಣದಲ್ಲೂ ಇದನ್ನು ಸ್ಪಷ್ಟವಾಗಿ ಘೋಷಿಸಿದ್ದರು. ಮಾನವ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘೋಷಣೆ. ಆ ಘೋಷಣೆಗೆ ಸಾಕ್ಷಿಯಾದ ಅದೇ ಅರಫಾ ಮೈದಾನದಲ್ಲಿ ಇಂದು ಮುಸ್ಲಿಮರು ಪವಿತ್ರ ಹಜ್ ಕರ್ಮಕ್ಕಾಗಿ ಒಂದುಗೂಡುತ್ತಾರೆ. ಮತ್ತೆ ಮತ್ತೆ ಸಮಾನತೆ, ಸಹೋದರತೆಯ ಸಂದೇಶವನ್ನು ಜಗತ್ತಿನೆಲ್ಲೆಡೆ ಸಾರುತ್ತಾರೆ.

- ಬಶೀರ್ ಅಹಮದ್, ಮಡಿಕೇರಿ.