ಮಡಿಕೇರಿ, ಜೂ. ೨೮: ವಿದೇಶದಲ್ಲಿ ನೆಲೆಸಿದ್ದ ವ್ಯಕ್ತಿಯೋರ್ವರು ಇದೀಗ ತವರು ಜಿಲ್ಲೆಗೆ ಆಗಮಿಸಿದಾಗ ಅವರಿಗೆ ಸಂಬAಧಿಸಿದ ಜಾಗವನ್ನು ಅವರ ಕೆಲವು ಸಂಬAಧಿಕರು ನಕಲಿ ದಾಖಲೆ ಸೃಷ್ಟಿಸಿ ತಮಗಳ ಹೆಸರಿಗೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಅವರು ಇದೀಗ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಹಾತೂರು ಗ್ರಾಮ ಮೂಲದವರಾದ ಕೆ.ಬಿ. ಪೂಣಚ್ಚ ಅವರು ಅಮೇರಿಕಾದಲ್ಲಿ ಪಶುವೈದ್ಯರಾಗಿದ್ದು, ಅಲ್ಲೆ ನೆಲೆಸಿದ್ದರು. ಅವರಿಗೆ ಸೇರಿದ ಜಾಗವನ್ನು ಅವರ ಸಹೋದರ ಕೆ.ಬಿ. ತಿಮ್ಮಯ್ಯ ಅವರು ಅನುಭವಿಸಿಕೊಂಡು ಬರುತ್ತಿದ್ದರು. ನಂತರದಲ್ಲಿ ತಿಮ್ಮಯ್ಯ ಅವರು ಮೃತಪಟ್ಟಿದ್ದು, ಬಳಿಕ ಅವರ ಪುತ್ರ ಧೀರಜ್ ನೋಡಿಕೊಳ್ಳುತ್ತಿದ್ದರು. ಇದೀಗ ೨೦೨೨ರಲ್ಲಿ ನಿವೃತ್ತಿ ಬಳಿಕ ಪೂಣಚ್ಚ ಸ್ವಗ್ರಾಮಕ್ಕೆ ಆಗಮಿಸಿ ಆಸ್ತಿ ದಾಖಲೆ ಪರಿಶೀಲಿಸಿದಾಗ ಈ ದಾಖಲೆಗಳನ್ನು ಸಹೋದರನ ಮಗ ಧೀರಜ್; ಅವರ ಪತ್ನಿ ಲಿಖಿತಾ ಹಾಗೂ ತಾಯಿ ಲಿಲ್ಲಿ ಅವರ ಹೆಸರಿಗೆ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
೨೦೧೧ ರಿಂದ ೨೦೨೩ರ ಇಸವಿಯ ನಡುವೆ ಈ ದಾಖಲೆಯನ್ನು ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಪೂಣಚ್ಚ ಆರೋಪಿಸಿ ದೂರು ನೀಡಿದ್ದಾರೆ. ಅಲ್ಲದೆ ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹಾಗೂ ಮತ್ತೋರ್ವ ಸಹೋದರ ಈ ಹಿಂದೆ ದಿವಂಗತರಾಗಿರುವ ಚಂಗಪ್ಪ ಅವರ ನಕಲಿ ಸಹಿಯನ್ನು ಮಾಡಿ ಈ ವಂಚನೆ ಮಾಡಲಾಗಿದೆ ಎಂಬ ಆರೋಪದೊಂದಿಗೆ ಈ ಕೃತ್ಯದ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೆ.ಬಿ. ಪೂಣಚ್ಚ ದೂರು ನೀಡಿದ್ದಾರೆ. ಇದರಂತೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.