ಸೋಮವಾರಪೇಟೆ, ಜೂ. ೨೮: ಕಳೆದ ಮೂರು ದಿನಗಳಿಂದ ಅಲ್ಪ ಮಳೆಯಾಗುತ್ತಿರುವ ಹಿನ್ನೆಲೆ ಸೋಮವಾರಪೇಟೆ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯಗಳಿಗೆ ಚಾಲನೆ ದೊರಕಿದೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿ ಯಲ್ಲಿ ಆಶಾದಾಯಕ ಮಳೆಯಾ ಗುತ್ತಿದ್ದು, ರೈತರು ತಮ್ಮ ಗದ್ದೆಗಳ ಉಳುಮೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆಗಾಗಲೇ ಗದ್ದೆಗಳ ಉಳುಮೆ, ಸಸಿಮಡಿ ತಯಾರಿ ಮಾಡಿಕೊಂಡಿರುತ್ತಿದ್ದ ರೈತರು, ಈ ಬಾರಿ ಮಳೆ ದೂರವಾದ ಹಿನ್ನೆಲೆ ಕೃಷಿ ಕಾರ್ಯಗಳಿಂದ ದೂರವಾಗಿ, ಆಗಸದತ್ತ ಮುಖ ಮಾಡಿದ್ದರು.
ಇದೀಗ ಮೂರು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆ ಗದ್ದೆಗಳ ಉಳುಮೆ ಮತ್ತು ಸಸಿಮಡಿ ತಯಾರಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇತ್ತ ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವುದು, ಚಿಗುರು ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ.