ಕೂಡಿಗೆ, ಜೂ. ೨೮ : ಇಲ್ಲಿಗೆ ಸಮೀಪದ ಬಸವನಹಳ್ಳಿ ಗಿರಿಜನ ವಿವಿದೋದ್ದೇಶ ಸಹಕಾರ ಸಂಘದ (ಲ್ಯಾಂಪ್ಸ್) ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ನ ಅರುಣ್ ರಾವ್ ಆಯ್ಕೆಯಾದರು.
ಅಧ್ಯಕ್ಷರ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯ ೧೧ ಮತಗಳ ಪೈಕಿ ಕಾಂಗ್ರೆಸ್ನ ಅರುಣ್ ರಾವ್ ೭, ಬಿಜೆಪಿಯ ಸುರೇಶ್ ಅವರಿಗೆ ೪ ಮತಗಳನ್ನು ಪಡೆಯುವ ಮೂಲಕ ಅರುಣ್ ರಾವ್ ಮುಂದಿನ ೧೯ ತಿಂಗಳ ಅವಧಿಗೆ ಅಧ್ಯಕ್ಷರಾಗಿ ಚುನಾಯಿತರಾದರು.
ನಂತರ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಜಯೋ ತ್ಸವ ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪಾತ್ರ ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಅವರನ್ನು ಗೌರವಿಸಲಾಯಿತು.
ಈ ಬಗ್ಗೆ ಮಾತನಾಡಿದ ವಿ.ಪಿ. ಶಶಿಧರ್, ಶಾಸಕ ಡಾ. ಮಂಥರ್ ಗೌಡ ಸೇರಿದಂತೆ ಕಾಂಗ್ರೆಸ್ ಪ್ರಮುಖರ ಗೆಲುವಿನ ತಂತ್ರದಿAದ ಬಿಜೆಪಿ ಬಹುಮತವಿದ್ದರೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಬಿಜೆಪಿ ಪತನದ ಹಾದಿಯ ದಿಕ್ಸೂಚಿ. ಮುಂದಿನ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ನ ವಿಜಯದ ನಾಗಾಲೋಟ ಮುಂದುವರೆಯಲಿದೆ ಎಂದರು.
ನೂತನ ಅಧ್ಯಕ್ಷ ಅರುಣ್ ರಾವ್ ಮಾತನಾಡಿ, ಇರುವ ಅಲ್ಪ ಅವಧಿಯಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್, ಲ್ಯಾಂಪ್ಸ್ ನಿರ್ದೇಶಕ ಉದಯಕುಮಾರ್, ಮಾಜಿ ನಿರ್ದೇಶಕ ಕಾಳಿಂಗ, ಗಿರಿಜನ ಮುಖಂಡ ಪ್ರಕಾಶ್, ಸ್ವಾಮಿಯಪ್ಪ, ಮಂಜು, ಕೂಡಿಗೆ ಗ್ರಾಪಂ ಸದಸ್ಯ ಅನಂತ್, ಶಿವಕುಮಾರ್, ಮಾಜಿ ಸದಸ್ಯ ಕೃಷ್ಣ, ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುನಿಲ್ ರಾವ್, ಕಾಂಗ್ರೆಸ್ ಕಿಸಾನ್ ಘಟಕದ ನವೀನ್ ಗೌಡ, ಪ್ರಮುಖರಾದ ಅರುಣ್ ಮಾದಪ್ಪ ಮತ್ತಿತರರು ಇದ್ದರು.