ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಬಕ್ರೀದ್ ಹಬ್ಬವನ್ನು ಈ ಬಾರಿ ತಾ. ೨೯ ರಂದು ಆಚರಿಸಲಾಗುತ್ತಿದೆ. ಹಿಜರಿ ವರ್ಷದ ಕೊನೆಯ ತಿಂಗಳಾದ ದುಲ್ ಹಜ್ಜ್ ೧೦ ರಂದು ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಬಕ್ರೀದ್ ದಿನ ಸಂತೋಷದಿAದ ಎಲ್ಲರೂ ಪರಸ್ಪರ ಹಸ್ತಲಾಘವ, ಶುಭಕೋರುತ್ತಾ, ನೆರೆಯ ಮನೆಗಳಿಗೆ ಹಾಗೂ ಕುಟುಂಬಗಳಿಗೆ ಭೇಟಿ ನೀಡಿ ಎಲ್ಲರೂ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ತ್ಯಾಗದ ಹಬ್ಬವಾದ ಬಕ್ರೀದ್ ರಂಜಾನ್ ಹಬ್ಬದ ಎರಡು ತಿಂಗಳ ನಂತರ ಬರುತ್ತದೆ. ‘ಈದ್ ಉಲ್ ಅದಾ’ ಎಂದು ಬಕ್ರೀದ್ ಹಬ್ಬವನ್ನು ಕರೆಯುತ್ತಾರೆ.
ಬಕ್ರೀದ್ ಹಬ್ಬದ ಇತಿಹಾಸ
ಅಲ್ಲಾಹುನ ಮಾರ್ಗದಲ್ಲಿ ನೀಡಲಾಗುವ ತ್ಯಾಗದ ಹಬ್ಬ ಎಂದು ಕೂಡ ಬಕ್ರೀದ್ ಅನ್ನು ಕರೆಯಲಾಗುತ್ತದೆ. ಅದಾ ಎಂಬುದು ಅರೇಬಿಕ್ ಪದವಾಗಿದ್ದು, ಇದರರ್ಥ ತ್ಯಾಗ, ಬಲಿದಾನ ಮತ್ತು ಈದ್ ಎಂದರೆ ಹಬ್ಬ. ಅಲ್ಲಾಹು ತನ್ನ ಭಕ್ತರನ್ನು ಪರೀಕ್ಷಿಸಲು ಹಜರತ್ ಇಬ್ರಾಹಿಂನನ್ನು ಆರಿಸಿಕೊಳ್ಳುತ್ತಾನೆ.
ಇಬ್ರಾಹಿಂ ಕನಸಿನಲ್ಲಿ ಒಮ್ಮೆ ಅಲ್ಲಾಹುನು ಕಾಣಿಸಿಕೊಂಡು ನಿನಗೆ ತುಂಬಾ ಪ್ರಿಯವಾದ ಅಥವಾ ಹತ್ತಿರವಾದ ವಸ್ತುವನ್ನು ನನಗೆ ತ್ಯಾಗ ಮಾಡಲು ಕೇಳಿಕೊಂಡನು. ಪ್ರತಿಯೊಬ್ಬ ತಂದೆಯAತೆ ಹಜರತ್ ಇಬ್ರಾಹಿಂ ಕೂಡ ತನ್ನ ಮಗ ಇಸ್ಮಾಯಿಲ್ನನ್ನು ಪ್ರೀತಿಸುತ್ತಿದ್ದ. ಇಸ್ಮಾಯಿಲ್ಗಿಂತ ಪ್ರಿಯವಾದುದ್ದು, ಮುಖ್ಯವಾದುದ್ದು ನನಗೆ ಯಾವುದೂ ಇಲ್ಲ. ಆದ್ದರಿಂದ ಮಗನನ್ನೇ ಅಲ್ಲಾಹುಗೆ ತ್ಯಾಗ ಮಾಡಬೇಕೆಂದು ನಿರ್ಧರಿಸುತ್ತಾನೆ.
ಹಜರತ್ ಇಬ್ರಾಹಿಂ ತನ್ನ ಮಗನೊಂದಿಗೆ ತ್ಯಾಗ ಮಾಡಲು ಹೊರಟಿದ್ದಾಗ, ದಾರಿಯಲ್ಲಿ ಸೈತಾನನನ್ನು ಭೇಟಿಯಾದನು. ಅವನು ನೀನು ನಿನ್ನ ಮಗನೊಂದಿಗೆ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದನು. ಅಲ್ಲಾಹುನ ಆಸೆಯಂತೆ ನಾನು ಅವನನ್ನು ತ್ಯಾಗ ಮಾಡಲಿದ್ದೇನೆ ಎಂದು ಹಜರತ್ ಇಬ್ರಾಹಿಂ ಭೂತಗಳಿಗೆ ಹೇಳಿದಾಗ, ಯಾವುದೇ ತಂದೆ ತನ್ನ ಮಗನನ್ನು ತ್ಯಾಗ ಮಾಡುತ್ತಾನೆಯೇ, ನೀನೆಂತ ತಂದೆ ?
ನೀನು ನಿನ್ನ ಮಗನನ್ನು ತ್ಯಾಗ ಮಾಡಿದರೆ, ನಿನ್ನ ಪಾಲನೆ ಮಾಡುವವನು ಎಲ್ಲಿಂದ ಬರುತ್ತಾನೆ ? ಮಗನನ್ನು ತ್ಯಾಗ ಮಾಡುವುದು ಅನಿವಾರ್ಯವಿಲ್ಲ, ಇನ್ನೂ ಅನೇಕ ವಿಷಯಗಳಿವೆ, ನೀವು ಆ ವಿಷಯಗಳನ್ನು ನಿಮ್ಮ ನೆಚ್ಚಿನದನ್ನಾಗಿ ಏಕೆ ತ್ಯಾಗ ಮಾಡಬಾರದು..? ಎಂದಾಗ, ಒಮ್ಮೆ, ಈ ದೆವ್ವ ಏನು ಹೇಳುತ್ತಿದೆ, ಇದು ಹೇಳುತ್ತಿರುವುದು ಸರಿಯಾಗಿದೆಯಲ್ಲಾ ಎಂದು ಹಜರತ್ ಇಬ್ರಾಹಿಂ ಭಾವಿಸಿದನು. ಅವನ ಮನಸ್ಸು ಕೂಡ ನಡುಗಿತು. ಆದರೆ, ಅದು ತಪ್ಪು ಎಂದು ಅವನು ಭಾವಿಸಿದನು. ಅದು ಅಲ್ಲಾಹುಗೆ ನಾನು ಹೇಳುವ ಸುಳ್ಳಾಗುತ್ತದೆ. ಅದು ಅವರ ಆದೇಶಗಳಿಗೆ ಅವಿಧೇಯತೆ ಎಂದು ಅವನು ಭಾವಿಸಿದನು.
ಮಗನನ್ನು ತ್ಯಾಗ ಮಾಡುವಾಗ, ಮಗನ ಬಾಂಧವ್ಯವು ಅಲ್ಲಾಹುನ ಪ್ರೀತಿಯಲ್ಲಿ, ಭಕ್ತಿಯಲ್ಲಿ ಅಡಚಣೆಯಾಗದಂತೆ ತನ್ನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಅವನು ಭಾವಿಸಿ ಬಟ್ಟೆಯನ್ನು ಕಟ್ಟಿ ಮಗನನ್ನು ಬಲಿ ಕೊಡಲು ನಿರ್ಧರಿಸುತ್ತಾನೆ. ನಂತರ ಅವನು ತನ್ನ ಕಣ್ಣುಗಳಿಂದ ಬಟ್ಟೆಯನ್ನು ತೆಗೆದಾಗ, ತನ್ನ ಮಗ ಸುರಕ್ಷಿತವಾಗಿ ನಿಂತಿರುವುದನ್ನು ನೋಡಿ ಆಘಾತಕ್ಕೊಳಗಾದನು. ಆಗ ಆತನಿಗೆ ಇದು ಅಲ್ಲಾಹುನ ಮಹಿಮೆ, ಅಲ್ಲಾಹು ನನ್ನ ಭಕ್ತಿಯನ್ನು ಪರೀಕ್ಷಿಸಲು ಹೀಗೆ ಮಾಡಿದ್ದಾನೆ ಎನ್ನುವುದು ಆತನಿಗೆ ತಿಳಿಯುತ್ತದೆ. ಅಂದಿನಿAದ ಆಡುಗಳನ್ನು, ಕುರಿಗಳನ್ನು ಬಲಿ ನೀಡುವ ಅಭ್ಯಾಸ ಪ್ರಾರಂಭವಾಯಿತು. ಈ ಕಾರಣಕ್ಕಾಗಿ ಈ ಹಬ್ಬವನ್ನು ಬಕ್ರಾ ಈದ್ ಅಥವಾ ಬಕ್ರೀದ್ ಎಂದೂ ಕರೆಯುತ್ತಾರೆ. ಆಡುಗಳಲ್ಲದೆ, ಕುರಿ, ಒಂಟೆಗಳು ಮತ್ತು ಎಮ್ಮೆಗಳನ್ನು ಸಹ ಬಲಿ ನೀಡಲಾಗುತ್ತದೆ ಆದರೆ ಅವುಗಳು ಸಂಪೂರ್ಣವಾಗಿ ಆರೋಗ್ಯಕರವಾಗಿರಬೇಕು ಎಂಬ ಷರತ್ತು ಇದೆ. ಅಲ್ಲಾಹುಗೆ ಸಾಕಷ್ಟು ಗೌರವ ನೀಡುವ ಸಂಪ್ರದಾಯವಿದೆ. ಬಕ್ರೀದ್ ಆಚರಿಸುವ ದಿನದಂದು ಹಜ್ ಸಹ ನಡೆಯುತ್ತದೆ.
ಬಕ್ರೀದ್ ಸಂಭ್ರಮದಲ್ಲಿ ಬಡವರನ್ನು ಮರೆಯದಿರಿ
ನಾವೆಲ್ಲರೂ ಬಕ್ರೀದ್ ಸಂಭ್ರಮದಲ್ಲಿರುವಾಗ, ನಮ್ಮ ನೆರೆ ಮನೆಯವರು, ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದಾರಾ ! ಅವರ ಬಡತನದಿಂದ ಆಚರಿಸಲು ಸಾಧ್ಯವಾಗದೆ ಇದ್ದರೆ ಅವರೊಂದಿಗೆ ಬಕ್ರೀದ್ ಹಬ್ಬವನ್ನು ಆಚರಿಸುವುದು ಒಬ್ಬ ನೈಜ ಮುಸಲ್ಮಾನನ ಕರ್ತವ್ಯವಾಗಿದೆ.
ತನ್ನ ಮಕ್ಕಳು ಹೊಸ ಶೈಲಿಯ ಉಡುಪುಗಳನ್ನು ಧರಿಸಿ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿರುವಾಗ, ಬಡ ಮಕ್ಕಳು ಹಳೆಯ ಉಡುಪುಗಳನ್ನು ಧರಿಸಿ ಹಬ್ಬವನ್ನು ಆಚರಿಸುತ್ತಿದ್ದರೆ, ಅಂತಹ ಬಡ ಮಕ್ಕಳಿಗೆ ನಾವು ಆರ್ಥಿಕವಾಗಿ ನೆರವಾಗಿ ಇಡೀ ಸಮಾಜಕ್ಕೆ ಬಕ್ರೀದ್ ಸಂದೇಶವನ್ನು ಸಾರಬೇಕಾಗಿದೆ.
ಸಮಾಜದಲ್ಲಿರುವ ನಿರ್ಗತಿಕರು, ಬಡವರು, ಶೋಷಿತರಿಗೆ ಬಕ್ರೀದ್ ದಿನ ನೆರವಾಗೋಣ. ಬಕ್ರೀದ್ ದಿನ ಎಲ್ಲರೂ ವಿಶೇಷ ಪ್ರಾರ್ಥನೆ ನೆರವೇರಿಸಿ, ಅರ್ಥಗರ್ಭಿತವಾಗಿ ತ್ಯಾಗ ಮತ್ತು ಬಕ್ರೀದ್ ಹಬ್ಬವನ್ನು ಆಚರಿಸೋಣ. ಎಲ್ಲರಿಗೂ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು. - ಕೆ.ಎಂ. ಇಸ್ಮಾಯಿಲ್ ಕಂಡಕರೆ