ಚೆಯ್ಯಂಡಾಣೆ, ಜೂ. ೨೭: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡು ನಿರಂತರ ದಾಳಿ ನಡೆಸುತ್ತಿದೆ. ಅಪಾರ ಪ್ರಮಾಣದ ಫಸಲು ನಾಶವಾಗಿದೆ. ಬಾಳೆ, ಅಡಿಕೆ, ಕಾಫಿ, ತೆಂಗು, ಒಳ್ಳೆಮೆಣಸು ಗಿಡಗಳಿಗೆ ಕಾಡಾನೆಗಳು ಹಾನಿ ಮಾಡಿದೆ. ಕಳೆದ ವಾರ ಚೇಲಾವರದಲ್ಲಿ ಮಹಿಳೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ತೋಟಗಳಿಗೆ ಕಾರ್ಮಿ ಕರು ತೆರಳಲು ಹಿಂದೇಟು ಹಾಕುತ್ತಿದ್ದಾರೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡುವುದ ರೊಂದಿಗೆ ಚೇಲಾವರ ದಲ್ಲಿ ತೋಟಕ್ಕೆ ತೆರಳುವ ಗೇಟನ್ನು ತುಳಿದು ಹಾನಿಪಡಿಸಿವೆ.

ಕೂಡಲೇ ಅರಣ್ಯ ಇಲಾಖೆ ಕಾಡಾನೆ ಹಿಂಡನ್ನು ಕಾಡಿಗಟ್ಟಬೇಕು. ಇಲ್ಲವೇ ತ್ವರಿತಗತಿಯಲ್ಲಿ ಆನೆಯನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಸ್ಥ ಹಾಗೂ ಹಾನಿಗೊಳಪಟ್ಟ ತೋಟದ ಮಾಲೀಕ ಎಸ್.ಎಸ್. ಸುಮಂತ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ವರ್ಷದಿಂದ ವರ್ಷಕ್ಕೆ ಕಾಡಾನೆ ಹಾವಳಿ ಮಿತಿಮೀರಿದ್ದು ಆನೆ ಹಿಂಡು ತೋಟಗಳಿಗೆ ಲಗ್ಗೆ ಇಟ್ಟು ಫÀಸಲು ಗಿಡಗಳನ್ನು ನಾಶ ಮಾಡುತ್ತಿವೆ. ೧೧ಕ್ಕೂ ಹೆಚ್ಚು ಕಾಡಾನೆ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಪಡಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಬಂದು ಮಾಹಿತಿ ಸಂಗ್ರಹಿಸಿ ತೆರಳುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಅರಣ್ಯ ಇಲಾಖೆ ಕೂಡಲೇ ಕಾಡಾನೆ ಹಾವಳಿ ಶಾಶ್ವತವಾಗಿ ತಡೆಗಟ್ಟಬೇಕು. ಇಲ್ಲವೇ ತ್ವರಿತಗತಿಯಲ್ಲಿ ಆನೆಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿದರು.

ಚೇಲಾವರದ ಪಿ.ಪಿ. ಮಾಚಯ್ಯ ಅವರ ಅಂಗಳಕ್ಕೆ ಕಾಡಾನೆ ನುಗ್ಗಿ ಇಂಟರ್ ಲಾಕ್‌ಗೆ ಹಾನಿಪಡಿಸಿದೆ, ಸಮೀಪದಲ್ಲೇ ಇರುವ ಸುಧೀರ್ ರೆಡ್ಡಿಯವರ ತೋಟಕ್ಕೆ ತೆರಳುವ ಗೇಟ್‌ಗೆ ಹಾನಿಪಡಿಸಿದೆ ಇದಲ್ಲದೆ ಕೊಕೇರಿಯಲ್ಲಿ ಮಚ್ಚಂಡ ಸುಮತಿ ಎಂಬವರ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಹಾನಿಪಡಿಸಿದ್ದಲ್ಲದೆ ನಿನ್ನೆ ರಾತ್ರಿ ವಾಹನದಲ್ಲಿ ತೆರಳುವ ಸವಾರರಿಗೆ ೯ ಆನೆಗಳ ಹಿಂಡು ಚೆಯ್ಯಂಡಾಣೆ ಕಕ್ಕಬೆ ರಸ್ತೆಯ ಮೂಲಕ ಸಂಚರಿಸುತ್ತಿರುವುದು ಕಂಡುಬAದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೂಡಲೇ ಅರಣ್ಯ ಅಧಿಕಾರಿಗಳು, ನೂತನ ಶಾಸಕರು ಕಾಡಾನೆಗಳ ಕಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ. ನೊಂದ ಕುಟುಂಬಗಳಿಗೆ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಶ್ರಫ್