ಮಡಿಕೇರಿ, ಜೂ. ೨೭: ಮಾಯಮುಡಿ ಗ್ರಾಮ ಪಂಚಾಯಿತಿಗೆ ಸೇರಿದ ಮಾಯಮುಡಿ-ಬಾಳಾಜಿ-ಧನುಗಾಲ ಮತ್ತು ರುದ್ರಬೀಡು ಗ್ರಾಮಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಕಾಡಾನೆಗಳ ಉಪಟಳವಿದ್ದು, ಕಳೆದ ಐದಾರು ವರ್ಷಗಳಿಂದ ಇದು ಮಿತಿಮೀರಿದೆ. ಕೂಡಲೇ ಸಂಬAಧಪಟ್ಟವರು ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರ ಸಭೆಯಲ್ಲಿ ಆಗ್ರಹಿಸಲಾಯಿತು. ಆನೆಗಳ ಉಪಟಳದಿಂದ ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಭತ್ತದ ಬೆಳೆಗಾರರು ಬೆಳೆ ಬೆಳೆಯಲು ಹಿಂಜರಿಯುವAತಾಗಿದೆ. ಈ ಕಾರಣದಿಂದ ಗ್ರಾಮ ವ್ಯಾಪ್ತಿಯ ಶೇಕಡ ಅರವತ್ತಕ್ಕೂ ಅಧಿಕ ಭತ್ತ ಬೆಳೆಯುವ ಪ್ರದೇಶವನ್ನು ಪಾಳು ಬಿಡಲಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ತೋಟದ ಕೆಲಸಗಾರರು ತೋಟಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ.

ನಾಗರಹೊಳೆ ಅರಣ್ಯ ಭಾಗದಿಂದ ನಿರಂತರವಾಗಿ ಆನೆಗಳ ದಾಳಿ ನಡೆಯುತ್ತಿದ್ದು, ತೋಟಗಳಿಗೆ ದಾಳಿಯಿಟ್ಟು ಬೆಳೆಗಾರರ ಬೆಳೆಗಳನ್ನು ನಿರಂತರವಾಗಿ ಹಾಳುಗೆಡವುತ್ತಿದ್ದು, ಆದಾಯಕ್ಕೂ ಕುತ್ತು ತರುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಆನೆ ಕಂದಕ ಹಾಗೂ ರೈಲ್ವೆ ಕಂಬಿ ಬೇಲಿಗಳನ್ನು ಅಳವಡಿಸಿದ್ದರೂ ಆನೆಗಳ ಉಪಟಳ ಎಗ್ಗಿಲ್ಲದೆ ಮುಂದುವರಿಯುತ್ತಿರುವ ಬಗ್ಗೆ ಗ್ರಾಮಸ್ಥರು ಅಳಲು ತೋಡಿಕೊಂಡರು.

ತಿತಿಮತಿ ಅರಣ್ಯ ವ್ಯಾಪ್ತಿಯ ಮರಪಾಲ ಎಂಬಲ್ಲಿ ಕೆಲವು ಕಡೆ ರೈಲ್ವೆ ಬೇಲಿ ನಿರ್ಮಿಸಲು ಬಾಕಿ ಇದ್ದು, ಅಲ್ಲಿನ ಆದಿವಾಸಿಗಳ ಮನ ಒಲಿಸಿ ಅಲ್ಲಿನ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮಾಡಿ ಮುಗಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲು ತೀರ್ಮಾನಿಸಲಾಯಿತು.

ಬೆಳೆ ನಾಶಕ್ಕೆ ವೈಜ್ಞಾನಿಕ ರೀತಿಯಲ್ಲಿ ಪರಾಮರ್ಶೆ ನಡೆಸಿ ಬೆಳೆ ನಾಶ ಪರಿಹಾರವನ್ನು ನಿಶ್ಚಯಿಸುವಂತೆ ಆಗ್ರಹಿಸಲಾಯಿತು. ಕಾಡಾನೆ ಕಾರ್ಯಾಚರಣೆ ಫಲಪ್ರದವಾಗದಿರುವ ಬಗ್ಗೆ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಭೆಯಲ್ಲಿ ಖಂಡನೆ ವ್ಯಕ್ತವಾಯಿತು.

ಕಾಡಾನೆಗಳ ಉಪಟಳ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರಲ್ಲಿ ಮತ್ತು ಜಿಲ್ಲಾಧಿಕಾರಿಗಳು ಸಂಬAಧಿಸಿದ ಎಲ್ಲಾ ಇಲಾಖಾಧಿಕಾರಿಗಳ ಗಮನ ಸೆಳೆಯಲು ಸ್ಥಳೀಯ ಶ್ರೀಮಾನಿಲ್ ಅಯ್ಯಪ್ಪ ಸೇವಾ ಸಮಿತಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು.

ವರದಿ: ಯಸ್.ಯಂ. ವಿಶ್ವನಾಥ್, ಮಾಯಮುಡಿ