ಮಾದಾಪುರ, ಜೂ. ೨೮: ಕಳೆದ ಬಾರಿ ೨೦೧೮ ರಲ್ಲಿ ಸುರಿದ ಭಾರೀ ಮಳೆಗೆ ವಸತಿ ಕಳೆದುಕೊಂಡ ಕೊಡಗಿನ ಜನರಿಗೆ ಜಂಬೂರಿನಲ್ಲಿ ಪುನರ್ವಸತಿ ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ‘ದೇವರು ಕೊಟ್ಟರೂ ಪೂಜಾರಿ ಕೊಡಲ್ಲ’ ಎಂಬAತೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ.

ಕೊಡಗಿನಲ್ಲಿ ಈಗ ಮಳೆಗಾಲ ಶುರುವಾಗಿದೆ. ಆದರೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ಕಾರ್ಯಪ್ಪ ಬಡಾವಣೆಯ ಸುಮಾರು ೩೮೩ ಮನೆಗಳಿಗೆ ಮೂರು - ನಾಲ್ಕು ದಿನಕ್ಕೊಮ್ಮೆ ನೀರನ್ನು ಟ್ಯಾಂಕರ್ ಮೂಲಕ ಒದಗಿಸಲಾಗುತ್ತಿದ್ದು, ಒಂದು ಮನೆಗೆ ಮೂರು, ನಾಲ್ಕು ಬಿಂದಿಗೆ ನೀರು ಮಾತ್ರ ದೊರಕುತ್ತಿದೆ. ರೋಗಿಗಳು, ನಿಸ್ಸಾಹಯಕರು ಸೇರಿದಂತೆ ವೃದ್ಧರು ನೀರಿಗಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ಈ ಹಿಂದೆ ಇಲ್ಲಿಗೆ ನಾಲ್ಕು ಬೋರ್‌ವೆಲ್‌ಗಳಿಂದ ೨೦ ಹೆಚ್.ಪಿ ಯ ಮೋಟರ್ ಮೂಲಕ ಅಂದಾಜು ೧ ಕೋಟಿ ವೆಚ್ಚದಲ್ಲಿ ಸುಮಾರು ೨.೫ ಲಕ್ಷ ಲೀಟರ್‌ನ ನೀರಿನ ಟ್ಯಾಂಕ್ ನಿರ್ಮಾಣ ಮಾಡಿರುವುದು ಈಗ ಬೋರ್‌ವೆಲ್‌ಗಳ ವೈಫಲ್ಯದಿಂದ ನೀರಿಲ್ಲದೆ ಬಡವಾಗಿದೆ. ಈ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದ್ದು, ಇಲ್ಲಿನ ಜನತೆಗೆ ಹೊಳೆಯಿಂದ ಟ್ಯಾಂಕರ್ ಮೂಲಕ ಮೂರು, ನಾಲ್ಕು ದಿನಕ್ಕೊಮ್ಮೆ ಒದಗಿಸಲಾಗುತ್ತಿದೆ.

ಇದರ ಪಕ್ಕದಲ್ಲೇ ಇನ್ಫೋಸಿಸ್ ವತಿಯಿಂದ ನಿರಾಶ್ರಿತರಿಗೆ ೨೦೦ ಮನೆಗಳನ್ನು ಕಳೆದ ಮೂರು, ನಾಲ್ಕು ವರ್ಷಗಳಿಂದ ನಿರ್ಮಿಸುತ್ತಿದ್ದು, ಈ ಬಾರಿ ಮಳೆಗಾಲ ಬಂದರೂ ಪಲಾನುಭವಿಗಳಿಗೆ ಕೈಗೆಟುಕದ ಹುಳಿ ದ್ರಾಕ್ಷಿಯಾಗಿದೆ. ಇದರಲ್ಲೂ ಈಗ ದೊಡ್ಡ ವಾಟರ್ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದು, ಇದೂ ಕೂಡ ಬೋರ್‌ವೆಲ್‌ಗಳನ್ನೇ ಅವಲಂಬಿಸಿದೆ. ಇದೂ ಕೂಡ ವೈಫÀಲ್ಯ ಹೊಂದುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿದೆ. ನೀರಿನ ಸಮಸ್ಯೆ ಬಗ್ಗೆ ಮಾದಾಪುರ ಪಂಚಾಯಿತಿಯಿAದ ಇನ್ನೂ ಪರಿಹಾರ ದೊರಕಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಡಾವಣೆಯ ಜನರು ಬೀದಿಗಿಳಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.