ವೀರಾಜಪೇಟೆ, ಜೂ. ೨೬: ಕಾರ್ಮಿಕರು ಸಂಘಟಿತರಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಜಿಲ್ಲಾ ಸಿಐಟಿಯು ಸಂಘಟನೆಯ ಮಾಜಿ ಅಧ್ಯಕ್ಷ ಡಾ. ದುರ್ಗಾಪ್ರಸಾದ್ ಅಭಿಲಾಷೆ ವ್ಯಕ್ತಪಡಿಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ‘ಸಿಐಟಿಯು ಸಂಘಟನೆಯ ೫೩ನೇ ಸಂಸ್ಥಾಪನಾ ದಿನಾಚರಣೆ' ಅಂಗವಾಗಿ ಜಿಲ್ಲಾ ಸಂಘಟನೆ ವತಿಯಿಂದ ವೀರಾಜಪೇಟೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ೧೯೭೦ರಲ್ಲಿ ಸಿಐಟಿಯು ಸಂಘಟನೆ ಸ್ಥಾಪನೆಗೊಂಡು ನಂತರ ಬ್ರಿಟಿಷರ ಅವಧಿಯಲ್ಲಿ ಕಾರ್ಮಿಕ ಸಂಘಟನೆ ಭಾರೀ ಚಳವಳಿ ನಡೆದಿತ್ತು ಎಂದು ಸಂಘಟನೆ ನಡೆದುಬಂದ ದಾರಿ ಬಗ್ಗೆ ವಿವರಿಸಿದ ದುರ್ಗಾಪ್ರಸಾದ್, ಕಾರ್ಮಿಕರು ಒಂದು ದಿನದ ಬದುಕಿಗಾಗಿ ಹೋರಾಟ ನಡೆಸದೆ ಜೀವನದಲ್ಲಿ ನೆಮ್ಮದಿಯ ಬದುಕಿಗಾಗಿ ಹೋರಾಟ ನಡೆಸುವಂತಾಗಬೇಕು. ಬಂಡವಾಳ ಶಾಹಿಗಳ ಒಡೆತನ ಆಳ್ವಿಕೆ ಇಲ್ಲದೆ ಕಾರ್ಮಿಕರಿಗೆ ಕೈಗೆಟುಕುವಂತ ಆಡಳಿತದ ಅಗತ್ಯವಿದೆ ಎಂದರು.
ಸಿಐಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ರಾಜ್ಯದಲ್ಲಿ ೧೮೫ ಕಾರ್ಮಿಕ ಸಂಘಟನೆಗಳು ಸಿಐಟಿಯುನ ಒಂದು ಭಾಗವಾಗಿ ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಿಸಲು ಮುಂದಾಗಿದೆ. ಕೊಡಗು ಜಿಲ್ಲೆಯಲ್ಲಿ ೫ ಲಕ್ಷ ಕಾರ್ಮಿಕರಿದ್ದು ಸಂಘಟನೆ ಮೂಲಕ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.
ಸಿಐಟಿಯು ಸಂಘಟನೆಯ ಜಿಲ್ಲಾ ಖಜಾಂಚಿ ಎನ್.ಡಿ.ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಬಾಲರಾಜ್ ರಂಗರಾವ್ ಮಾತನಾಡಿ, ಕೃಷಿ ಇಲಾಖೆಯ ರೈತ ವಿದ್ಯಾನಿಧಿಯಿಂದ ೮-೯-೧೦ನೇ ತರಗತಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಬಿ.ಸಿ. ಸಾಬ, ಜಿಲ್ಲಾ ಬಿಸಿಯೂಟ ಸಂಘಟನೆಯ ಕಾರ್ಯದರ್ಶಿ ಕುಸುಮ, ಸೋಮವಾರಪೇಟೆಯ ಚಾಮುಂಡಿ, ಅಂಗನವಾಡಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷೆ ಶೀಲ, ಪೊನ್ನಂಪೇಟೆಯ ಸುಮಿತ್ರಾ, ಸೋಮವಾರಪೇಟೆಯ ಸಾವಿತ್ರಿ, ಪ್ಲಾಂಟೇಷನ್ ಕಾರ್ಮಿಕ ಸಂಘಟನೆ ಅಧ್ಯಕ್ಷೆ ಪುಷ್ಪ, ಜನರಲ್ ವಕರ‍್ಸ್ ಯೂನಿಯನ್ ಉಪ ಕಾರ್ಯದರ್ಶಿ ರಾಚಪ್ಪಾಜಿ, ಹಮಾಲಿ ಕಾರ್ಮಿಕ ಸಂಘದ ಕಾರ್ಯದರ್ಶಿ ಶಾಜಿ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ, ಪೊನ್ನಂಪೇಟೆ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.