ಸಿದ್ದಾಪುರ, ಜೂ. ೨೬: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ರೈತರು ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ವಕೀಲರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಶಾಖೆಯ ವಾರ್ಷಿಕ ಮಹಾಸಭೆಯನ್ನು ಗೋಣಿಕೊಪ್ಪಲು ಪರಿಮಳ ಮಂಗಳ ವಿಹಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಚಳವಳಿಯನ್ನು ಉದ್ದೇಶವಾಗಿಸಿಕೊಂಡು ಚುನಾವಣೆ ಯಲ್ಲಿ ಸ್ಪರ್ಧೆ ಮಾಡುವ ವ್ಯಕ್ತಿ ಸೋತರು ಎಂದಿಗೂ ಚಳವಳಿಗಾರ ಎನಿಸಿಕೊಳ್ಳುತ್ತಾನೆ. ಕೊಡಗಿನಲ್ಲಿ ಕಾಡಾನೆ ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ರೈತ ಸಂಘದಿAದ ಸದ್ಯದಲ್ಲೆ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಲಾಗುತ್ತದೆ. ಅಲ್ಲದೆ ಕಾಡಾನೆ ದಾಳಿಯಿಂದ ಮೃತ ಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪರಿಹಾರ ಹಣವನ್ನು ರೂ. ೧೫ ಲಕ್ಷ ದಿಂದ ೫೦ ಲಕ್ಷಕ್ಕೆ ಏರಿಕೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠರಾದ ಅಶ್ವಥ್ ನಾರಾಯಣ ಅರಸ್ ಮಾತನಾಡಿ, ರಾಜ್ಯದಲ್ಲಿ ರೈತ ಸಂಘವು ವಿವಿಧ ಹೋರಾಟಗಳನ್ನು ಮಾಡುತ್ತಾ ರೈತರ ಪರವಾದ ನಿಲುವುಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ಒಂದೇ ಮಾರ್ಗ ಎಂದು ನುಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ರಾಜ್ಯ ರೈತ ಸಂಘದ ಆದೇಶದ ಮೇರೆಗೆ ಚುನಾವಣೆಯನ್ನು ಎದುರಿಸಿದ್ದೇನೆ. ಸ್ಪರ್ಧೆಯಲ್ಲಿ ಸೋತರೂ ಕೂಡ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಪರವಾಗಿ ನಿರಂತರವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ. ಯಾವುದೇ ಆಮಿಷಕ್ಕೆ ಒಳಗಾಗದೆ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇನೆ ಎಂದರು. ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು ವಿದ್ಯುತ್ ನಿಗಮದಿಂದ ದರ ಏರಿಕೆಯನ್ನು ಖಂಡಿಸಿ ಜುಲೈ ೧೦ ರಂದು ಜಿಲ್ಲೆಯ ವಿದ್ಯುತ್ ನಿಗಮ ಕಚೇರಿಯ ಮುಂದೆ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾಡಾನೆ ದಾಳಿಯಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೃಷಿ ಫಸಲು ನಾಶವಾಗಿದೆ. ಇದರಿಂದಾಗಿ ಕಾರ್ಮಿಕರಿಗೆ ವೇತನ ನೀಡಲು ಕಷ್ಟ ಸಾಧ್ಯವಾಗಿದ್ದು ರಾಜ್ಯ ಸರ್ಕಾರವು ಮಧ್ಯೆ ಪ್ರವೇಶಿಸಿ ಕಾರ್ಮಿಕರಿಗೆ ಶೇ. ೫೦ ರಷ್ಟು ವೇತನ ನೀಡಲು ಮುಂದಾಗುವAತೆ ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಕಾನೂನು ಸಲಹೆಗಾರರಾದ ಕೆ.ಬಿ. ಹೇಮಚಂದ್ರ ಅವರು ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಲೆಕ್ಕ ಪತ್ರ ಮಂಡನೆ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕೋಶಾಧಿಕಾರಿ ಇಟ್ಟೀರ ಸಭೀತಾ ಭೀಮಯ್ಯ, ಉಪಾಧ್ಯಕ್ಷ ಶಂಕ್ರಪ್ಪ ಉಪಸ್ಥಿತರಿದ್ದರು. ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಸ್ವಾಗತಿಸಿ ಪೂವಯ್ಯ ವಂದಿಸಿದರು.