ಪೊನ್ನAಪೇಟೆ, ಜೂ. ೨೬: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಸಂದರ್ಭ ಪೊನ್ನಂಪೇಟೆ ಪೊಲೀಸರು ವಾಹನ ಸಹಿತ ಇಬ್ಬರನ್ನು ಬಂಧಿಸಿರುವ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೊನ್ನಂಪೇಟೆ ಪೊಲೀಸರು ಗಸ್ತಿನಲ್ಲಿದ್ದ ಸಂದರ್ಭ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೇಗೂರುಕೊಲ್ಲಿ ಮುಖ್ಯರಸ್ತೆಯಲ್ಲಿ ಅಶೋಕ ಲೈಲ್ಯಾಂಡ್ ಗೂಡ್ಸ್ ಗಾಡಿ (ಕೆಎ-೧೨ ಅ-೧೦೮೦)ಯಲ್ಲಿ ಎರಡು ಹೋರಿ ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಈ ಸಂದರ್ಭ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ಕೇರಳದ ಮಾನಂದವಾಡಿಯ ನಿವಾಸಿ ಕುಮಾರ್, ಗೋಣಿಕೊಪ್ಪಲು ಸಮೀಪದ ಚೆನ್ನಂಗೊಲ್ಲಿ ನಿವಾಸಿ ಪ್ರಸನ್ನ ಎಂಬವರುಗಳನ್ನು ಬಂಧಿಸಿ, ಕರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೋರ್ವ ಆರೋಪಿ ಉಬೇದ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಪೊನ್ನಂಪೇಟೆ ಠಾಣಾಧಿಕಾರಿ ಲಕ್ಷಣ ಕಾಮಣ್ಣವರ್, ಅಪರಾಧ ವಿಭಾಗ ಠಾಣಾಧಿಕಾರಿ ಸುಬ್ರಮಣಿ, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಮಂಜುನಾಥ್, ಮುತ್ತು ರಾಜ್, ಭೀಮಜ್ಜ, ಬಸವರಾಜ್, ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕರುಗಳನ್ನು ಮೈಸೂರಿನ ಪಿಂಜರ್ಪೋಲ್ಗೆ ಸಾಗಿಸಲು ಪೊಲೀಸರು ಕ್ರಮಕೈಗೊಂಡಿದ್ದಾರೆ. -ಚನ್ನನಾಯಕ