ಕೂಡಿಗೆ, ಜೂ. ೨೫: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಆಧಾರಿತವಾಗಿ ಮೆಕ್ಕೆ ಜೋಳವನ್ನು ಬೆಳೆಯುತ್ತಾರೆ. ಆದರೆ ಈ ಸಾಲಿನಲ್ಲಿ ಮುಂಗಾರು ಮಳೆ ಈ ವ್ಯಾಪ್ತಿಯಲ್ಲಿ ಕ್ಷೀಣಿಸಿದೆ. ಆದರೂ ಸಹ ರೈತರು ಮುಂದೆ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಬಿತ್ತನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಮೆಕ್ಕೆಜೋಳದ ಬೆಳೆಗೆ ಭೂಮಿಯು ಹದ ಇಲ್ಲದೆ ಸಮರ್ಪಕವಾಗಿ ಬೆಳೆದಿಲ್ಲ. ಆದರೆ ಮೊಳಕೆಯಾಗಿ ೧೫ ದಿನಗಳು ಕಳೆದ ನಂತರದಲ್ಲಿ ಅಳಿದುಳಿದ ಮೆಕ್ಕೆಜೋಳದ ಬೆಳೆಗೆ ಈಗಾಗಲೇ ರೋಗ ಕಾಣಿಸಿಕೊಂಡ ಪರಿಣಾಮವಾಗಿ ರೈತರು ಕ್ರಿಮಿನಾಶಕ ಔಷಧಗಳ ಸಿಂಪಡಣೆ ಮಾಡುವಲ್ಲಿ ತೊಡಗಿದ್ದಾರೆ.

ಕಳೆದ ಒಂದು ತಿಂಗಳುಗಳಿAದ ಕುಶಾಲನಗರ ತಾಲೂಕು ವ್ಯಾಪ್ತಿಯ ೧೦ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯವನ್ನು ಮಾಡಿದ್ದಾರೆ. ತಮ್ಮ ಕೊಳವೆ ಬಾವಿಯಿಂದ ನೀರಾವರಿ ಮಾಡಿ ಬೆಳೆದರೂ, ಮೆಕ್ಕೆಜೋಳದ ಬೆಳೆಯು ಅರ್ಧ ಅಡಿಯಷ್ಟು ಎತ್ತರ ಬೆಳೆಯುವಷ್ಟ ರಲ್ಲಿಯೇ ರೋಗ ಕಾಣಿಸಿಕೊಂಡು ಜೋಳದ ಗರಿಗಳನ್ನು ಹುಳುಗಳು ತಿನ್ನುವ ರೋಗ ಕಾಣಿಸಿಕೊಂಡಿದೆ. ಮಳೆ ಇಲ್ಲದೆ ಇರುವುದರಿಂದಾಗಿ ಬಿಸಿಲಿನ ತಾಪಮಾನಕ್ಕೆ ರೋಗ ಹೆಚ್ಚಾಗುತ್ತಿದೆ. ಇದರಿಂದಾಗಿ ಈ ವ್ಯಾಪ್ತಿಯ ರೈತರು ರೋಗ ನಿರೋಧಕ ಶಕ್ತಿಯ ಔಷಧಿಗಳನ್ನು ಸಿಂಪಡಣೆ ಮಾಡುವಲ್ಲಿ ತೊಡಗಿದ್ದಾರೆ.-ಕೆ.ಕೆ. ನಾಗರಾಜಶೆಟ್ಟಿ.