ಮಡಿಕೇರಿ, ಜೂ. ೨೫: ಸಿದ್ದಾಪುರ-ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಚೆಟ್ಟಳ್ಳಿ ಸಮೀಪದ ಅಬ್ಯಾಲದಲ್ಲಿ ರಸ್ತೆಯ ಪಕ್ಕದಲ್ಲೇ ಇರುವ ಗುಡ್ಡಗಳು ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಇರುವ ಗುಡ್ಡಗಳು ಜರುಗಿದ್ದವು. ಇದೀಗ ಮತ್ತೊಮ್ಮೆ ಬರೆ ಕುಸಿಯುವ ಸಾಧ್ಯತೆ ಇದೆ. ಬರೆ ಕುಸಿತಗೊಂಡರೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಇದೆ. ಚೆಟ್ಟಳ್ಳಿ-ಮಡಿಕೇರಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಕಳೆದ ಎರಡು ವಾರಗಳಿಂದ ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆ ಬಂದ್ ಆಗಿದೆ.
ಕಾಮಗಾರಿ ಪೂರ್ಣಗೊಂಡು, ೧೫ ದಿನಗಳಿಗೂ ಹೆಚ್ಚು ದಿನದ ನಂತರ ಚೆಟ್ಟಳ್ಳಿ -ಮಡಿಕೇರಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಾಧ್ಯವಾಗಬಹುದೆಂದು ಗುತ್ತಿಗೆದಾರರು ತಿಳಿಸಿದ್ದಾರೆ.
ರಸ್ತೆ ಬಂದ್ ಆಗುವ ಆತಂಕ! : ಈಗಾಗಲೇ ಕಳೆದ ಎರಡು ವಾರದಿಂದ ಚೆಟ್ಟಳ್ಳಿ-ಮಡಿಕೇರಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇನ್ನೇನು ಒಂದು ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಕಿರಿದಾದ ರಸ್ತೆಯ ಬದಿಯಲ್ಲಿ ಬೃಹತ್ ಕಂದಕ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿರುವ ರಸ್ತೆಯಲ್ಲಿ ಪ್ರಯಾಣಿಕರು ಸಂಚರಿಸಬೇಕಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯ ಅಬ್ಯಾಲ ಬಳಿ ಗುಡ್ಡಗಳು ಜರಿದು ರಸ್ತೆ ಸಂಚಾರ ಬಂದ್ ಆಗುತ್ತಿತ್ತು. ಈ ವರ್ಷ ಕೂಡ ಮಳೆಗಾಲದಲ್ಲಿ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸುರಿದ ಮಳೆಗೆ ಸಣ್ಣ ಪ್ರಮಾಣದಲ್ಲಿ ಜರಿದ ಗುಡ್ಡಗಳ ಮಣ್ಣು ರಸ್ತೆಯ ಬದಿಯಲ್ಲಿಯೇ ಇದೆ. ಇದನ್ನು ತೆರವುಗೊಳಿಸುವ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಮಳೆ ಸುರಿದರು ಗುಡ್ಡಗಳು ರಸ್ತೆಗೆ ಜರಿಯುವ ಭಯ ಜನರನ್ನು ಕಾಡುತ್ತಿದೆ.
ಲೋಕೋಪಯೋಗಿ ಇಲಾಖೆ ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಕಳೆದ ಹಲವಾರು ವರ್ಷಗಳಿಂದ ನಿರ್ಲಕ್ಷಿಸುತ್ತಾ ಬಂದಿದೆ ಎಂದು ಜನರು ಆರೋಪಿಸಿದ್ದಾರೆ. ಪ್ರತೀ ವರ್ಷ ಮಳೆಗಾಲದಲ್ಲಿ ಗುಡ್ಡಗಳು ಕುಸಿತಗೊಂಡರು ಕೂಡ ಲೋಕೋಪಯೋಗಿ ಇಲಾಖೆ ಮಾತ್ರ ಮಣ್ಣು ತೆರವುಗೊಳಿಸಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ. ವೈಜ್ಞಾನಿಕವಾಗಿ ರಸ್ತೆಗೆ ಗುಡ್ಡಗಳು ಕುಸಿಯದಂತೆ ಯಾವುದೇ ರೀತಿಯ ವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿಲ್ಲ. ಇದೀಗ ಮಳೆಗಾಲದಲ್ಲೇ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.
ಸಿದ್ದಾಪುರ ಮಾರ್ಗದಿಂದಾಗಿ ಚೆಟ್ಟಳ್ಳಿ ಮೂಲಕ ಮಡಿಕೇರಿ ತಲುಪಲು ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಚೆಟ್ಟಳ್ಳಿ-ಮಡಿಕೇರಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿö್ಯಸಿದೆ. ನೆಪಮಾತ್ರಕ್ಕೆ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ತಡೆಗೋಡೆ ನಿರ್ಮಿಸಿದರು ಕೂಡ, ಕಳಪೆ ಕಾಮಗಾರಿಯಿಂದ ತಡೆಗೋಡೆ ಬಿರುಕು ಬಿಟ್ಟಿದೆ.
ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ಪ್ರಾಣಕಳೆದುಕೊಂಡರು ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ರಸ್ತೆಯ ಬದಿಯಲ್ಲಿ ಬಾಯ್ತೆರೆದ ಗುಂಡಿಗಳು! : ಚೆಟ್ಟಳ್ಳಿ ಸಮೀಪದ ಅಬ್ಯಾಲದ ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ಗುಂಡಿಗಳು ಬಾಯ್ತೆರೆದಿವೆ. ರಸ್ತೆ ಬದಿಯಲ್ಲಿ ಬೃಹತ್ ಗುಂಡಿಗಳು ಬಲಿಗಾಗಿ ಕಾಯುತ್ತಿವೆ. ಕಿರಿದಾದ ರಸ್ತೆ ಹಾಗೂ ಮಣ್ಣು ಕುಸಿಯುವ ಆತಂಕವಿರುವ ಚೆಟ್ಟಳ್ಳಿ-ಮಡಿಕೇರಿ ರಸ್ತೆಯಲ್ಲಿ ಖಾಸಗಿ ಕಂಪನಿಯವರು ಕೇಬಲ್ ಅಳವಡಿಸಲು ಗುಂಡಿಗಳನ್ನು ತೋಡಿ ಮುಚ್ಚದೆ, ಕೇಬಲ್ ಅಳವಡಿಸಿದ್ದಾರೆ. ಖಾಸಗಿ ಕಂಪನಿಯವರು ರಸ್ತೆಯ ಬದಿಯಲ್ಲೇ ತೋಡಿರುವ ಗುಂಡಿಗಳಿAದ ಅಪಘಾತಗಳು ಸಂಭವಿಸಿದೆ.
ಕೇಬಲ್ ಅಳವಡಿಸಲು ತೋಡಿರುವ ಗುಂಡಿಗಳು ಇದೀಗ ಬಾಯ್ತೆರೆದಿವೆ. ರಸ್ತೆಯ ಬದಿಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿವೆ. ಮಳೆಗಾಲದಲ್ಲಿ ರಸ್ತೆ ಬದಿ ಸಂಪೂರ್ಣವಾಗಿ ಕುಸಿಯುವ ಆತಂಕ ಎದುರಾಗಿದೆ.
ತಡೆಗೋಡೆ ನಿರ್ಮಾಣ, ರಸ್ತೆ ಕುಸಿಯುವ ಭೀತಿ! : ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ೨.೫ ಕಿಲೋಮೀಟರ್ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ಮಣ್ಣು ಕುಸಿತಗೊಳ್ಳದಂತೆ ತಡೆಯಲು ಲೋಕೋಪಯೋಗಿ ಇಲಾಖೆ ತಡೆಗೋಡೆಗಳನ್ನು ನಿರ್ಮಿಸಿದೆ.
ಕಲ್ಲುಗಳಿಂದ ನಿರ್ಮಿಸಿರುವ ತಡೆಗೋಡೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲದಲ್ಲಿ ಕಲ್ಲುಗಳಿಂದ ನಿರ್ಮಿತವಾದ ತಡೆಗೋಡೆ ಸಂಪೂರ್ಣವಾಗಿ ಕುಸಿಯುವ ಹಂತ ತಲುಪಿದೆ. ಕಲ್ಲುಗಳಿಂದ ನಿರ್ಮಿತವಾದ ತಡೆಗೋಡೆ ಪಕ್ಕದಲ್ಲಿ ಮಣ್ಣು ತುಂಬಿಸಿ ಸಮತಟ್ಟು ಮಾಡಲು ಖಾಲಿ ಜಾಗವನ್ನು ಬಿಟ್ಟಿದ್ದಾರೆ. ಈಗಾಗಲೇ ತಡೆಗೋಡೆ ಪಕ್ಕದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ.
ಮಳೆಗಾಲದಲ್ಲಿ ಮಣ್ಣು ಹಾಕಿ ಸಮತಟ್ಟುಗೊಳಿಸಿದರು ಕೂಡ, ಮಳೆಯ ರಭಸಕ್ಕೆ ತಡೆಗೋಡೆ ಕುಸಿಯುವ ಸಾಧ್ಯತೆ ಇದೆ. ತಡೆಗೋಡೆ ಕುಸಿತಗೊಂಡರೆ, ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕಾಂಕ್ರೀಟ್ ರಸ್ತೆ ಕೂಡ ಹಾನಿಗೊಳಗಾಗುವ ಸಾಧ್ಯತೆ ತಳ್ಳ ಹಾಕುವಂತಿಲ್ಲ. ಇದರ ಬಗ್ಗೆ ಈ ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು, ತಡೆಗೋಡೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಾಗಿದೆ.
ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ! : ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯ ಕಾಂಕ್ರೀಟ್ ಕಾಮಗಾರಿ ಯಿಂದ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಿರುವು ದರಿಂದ, ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿದ್ದಾಪುರ, ನೆಲ್ಲಿ ಹುದಿಕೇರಿ, ಅಭ್ಯತ್ ಮಂಗಲ, ಕಾನಾನ್ಕಾಡು, ಚೆಟ್ಟಳ್ಳಿ, ಕಂಡಕರೆ ಈ ಭಾಗಗಳಿಂದ ಅತೀ ಹೆಚ್ಚು ವಿದ್ಯಾರ್ಥಿಗಳು ಮಡಿಕೇರಿ ಯ ವಿವಿಧ ಶಾಲಾ -ಕಾಲೇಜುಗಳಿಗೆ ತೆರಳಲು ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಬಸ್ಗಳನ್ನೇ ಆಶ್ರಯಿಸಿದ್ದರು. ಆದರೆ ಇದೀಗ ಈ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಚೆಟ್ಟಳ್ಳಿ-ಮಡಿಕೇರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಹುತೇಕ ಬಸ್ಗಳು ಸಿದ್ದಾಪುರ-ಮರಗೋಡು ಹಾಗೂ ಕತ್ತಲೆಕಾಡು ಮಾರ್ಗದಲ್ಲಿ ಸಂಚರಿಸುತ್ತಿವೆ.
ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಚೆಟ್ಟಳ್ಳಿ-ಗದ್ದೆಹಳ್ಳ ಮಾರ್ಗವಾಗಿ ಮಡಿಕೇರಿ ತಲುಪುತ್ತಿವೆ. ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.ಚೆಟ್ಟಳ್ಳಿ ಭಾಗದ ವಿದ್ಯಾರ್ಥಿಗಳಿಗೆ ಚೆಟ್ಟಳ್ಳಿ, ಮಡಿಕೇರಿ ಮಾರ್ಗ ಬಂದ್ ಆಗಿರುವುದರಿಂದ ಬಸ್ಸ್ ವ್ಯವಸ್ಥೆ ಇಲ್ಲದೆ, ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದಾರೆ.
ಸಂಜೆ ಸಮಯದಲ್ಲಿ ಬಸ್ ವ್ಯವಸ್ಥೆ ಇಲ್ಲದೆ, ಕೆಲವೊಂದು ವಿದ್ಯಾರ್ಥಿಗಳು ಮಡಿಕೇರಿಯಿಂದ ಬಸ್ ಮೂಲಕ ಸುಂಟಿಕೊಪ್ಪ ತಲುಪಿ, ಸಂಜೆ ವೇಳೆ, ಸುಂಟಿಕೊಪ್ಪದಿAದ ಆಟೋ ಬಾಡಿಗೆ ಮಾಡಿಕೊಂಡು ಚೆಟ್ಟಳ್ಳಿ ಭಾಗದ ವಿದ್ಯಾರ್ಥಿಗಳು ದಿನನಿತ್ಯ ಕಾಲೇಜಿಗೆ ತೆರಳುತ್ತಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಚೆಟ್ಟಳ್ಳಿ ಮಾರ್ಗದಲ್ಲಿ ಬಸ್ಸ್ ಸಂಚಾರವಿಲ್ಲದೆ ಸಿದ್ದಾಪುರ ಹಾಗೂ ಮರಗೋಡು ಮಾರ್ಗದಲ್ಲಿ ಸಂಚರಿಸುವ ಬಸ್ಸ್ ಮೂಲಕ ಕಾಲೇಜಿಗೆ ತೆರಳುತ್ತಿದ್ದಾರೆ. ಆದಷ್ಟು ಬೇಗ ಚೆಟ್ಟಳ್ಳಿ-ಮಡಿಕೇರಿ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
-ಕೆ.ಎಂ. ಇಸ್ಮಾಯಿಲ್ ಕಂಡಕರೆ