ಮಡಿಕೇರಿ, ಜೂ. ೨೫: ಪರಿಸರ ಸೌಂದರ್ಯ ಉಳಿಯಬೇಕು, ಅದರ ಪ್ರಯೋಜನ ಮುಂದಿನ ಪೀಳಿಗೆಗೂ ಸಿಗಬೇಕೆಂದರೆ ಇಂದಿನ ವಿದ್ಯಾರ್ಥಿ ಗಳಿಗೆ ಪ್ರಕೃತಿ ಉಳಿಸುವಂತಹ ಪೂರಕ ಕಲಿಕೆಗಳು ದೊರೆಯುವಂತಾಗಬೇಕು ಎಂದು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಪ್ರತಿಪಾದಿಸಿದರು.

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಇನ್ನೊಬ್ಬರ ಒತ್ತಡಕ್ಕೆ ಮಣಿಯದೆ ತಮ್ಮ ಮನಸ್ಸಿಗೆ ಹಿಡಿಸುವ ವೃತ್ತಿಯ ಕಡೆಗೆ ಆಸಕ್ತಿ ಬೆಳೆಸಿಕೊಂಡು ಮಕ್ಕಳು ಈ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮುಂದುವರಿಸ ಬೇಕು. ಪೋಷಕರು, ಗುರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಹೆಚ್ಚಿನ ಕಲಿಕೆಗೆ ಒತ್ತು ನೀಡಬೇಕು. ಒಳ್ಳೆಯ ಸ್ನೇಹ ಬಳಗದೊಂದಿಗೆ ಆರೋಗ್ಯ ವಂತ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಗೆಳೆಯರ ಮಧ್ಯೆ ಸಾತ್ವಿಕ ಚರ್ಚೆ ನಡೆಸಿ ಸಮಾಜದ ಆಗುಹೋಗುಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಇದರಿಂದ ವ್ಯಕ್ತಿತ್ವದ ವಿಕಸನ ಸಾಧ್ಯವಾಗುತ್ತದೆ ಎಂದರು.

ಪ್ರಕೃತಿ ಮೇಲೆ ಮಕ್ಕಳು ಪ್ರೀತಿ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದ ಪ್ರಯೋಜನವನ್ನೂ ಪಡೆದು ಕೊಳ್ಳಬೇಕು. ಅದೇ ರೀತಿ ದೈಹಿಕ ವಾಗಿಯೂ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಮೈದಾನದಲ್ಲಿ ಆಟವಾಡ ಬೇಕು. ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಕೃತಿ ಉಳಿಸುವ ಸಂಬAಧ ವಾರಕ್ಕೆ ಕನಿಷ್ಟ ೨ ಗಂಟೆ ಕಲಿಯುವಂತಾಗಬೇಕು. ಮಕ್ಕಳನ್ನು ಪ್ರಕೃತಿ ಮಡಿಲಿಗೆ ಕರೆದುಕೊಂಡು ಹೋಗಿ ಕಲಿಸುವ ವ್ಯವಸ್ಥೆ ಆಗಬೇಕು. ಮಕ್ಕಳಿಗೆ ಕಾಡು ತೋರಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ದೇಶ ಮತ್ತು ಸಮಾಜಕ್ಕೆ ನಿರೀಕ್ಷಿತ ಕೊಡುಗೆ ಸಿಗುತ್ತಿಲ್ಲ ಎಂದು ವಿಷಾದಿಸಿದ ಅವರು, ಪ್ರಜಾತಂತ್ರ ಬೇರು ಗಟ್ಟಿಗೊಳಿಸುವಲ್ಲಿ ಮಕ್ಕಳ ಪಾತ್ರ ಅಪಾರವಿದೆ. ಜಾತಿ ವ್ಯವಸ್ಥೆ ತೊಲಗಿಸುವ ನಿಟ್ಟಿನಲ್ಲಿ ಮಕ್ಕಳು ತಮಗಿಷ್ಟದ ಸಿದ್ದಾಂತ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಪೂವಯ್ಯ ಮಾತನಾಡಿ, ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವುದು ಸ್ವಾಗತಾರ್ಹ. ಮಕ್ಕಳ ಪ್ರತಿಭೆ ಗುರುತಿಸಲು ಅವಕಾಶ ಸಿಗಬೇಕು. ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರಿಂದ ಅವರ ಬದುಕಿಗೆ ದಾರಿ ತೋರಿಸಿ ದಂತಾಗುತ್ತದೆ ಎಂದು ಹೇಳಿದರು.

ಬೆಳ್ಳಿಹಬ್ಬ ಆಚರಣಾ ಸಮಿತಿ ಮಹಾಪೋಷಕ ಜಿ. ರಾಜೇಂದ್ರ ಮಾತನಾಡಿ, ಪತ್ರಕರ್ತರು ಎಂದರೆ ಪ್ರಚಾರಕ್ಕೆ ಬಳಸಿಕೊಳ್ಳುವ ಯಂತ್ರ ಎಂಬ ಸ್ಥಿತಿ ಬಂದಿದೆ. ಕೊಡಗಿನ ಪತ್ರಕರ್ತರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಮುಲಾಜಿಗೊಳಗಾಗದೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಮಾಜದ ಸಮಸ್ಯೆಗಳಿಗೆ ಕನ್ನಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರತಿಭಾ ಪುರಸ್ಕಾರದಂತಹ ಕಾರ್ಯ ಮುಂದುವರಿಯಬೇಕು. ಪತ್ರಕರ್ತರಲ್ಲಿ ಒಗ್ಗಟ್ಟು ಇರಬೇಕು. ಪತ್ರಕರ್ತರ ಸಂಕಷ್ಟಗಳಿಗೆ ಸಹಕಾರಿ ಆಗಲು ಶಾಶ್ವತ ನಿಧಿ ಒಂದನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪೋಷಕರ ಮುಂದೆಯೇ ಮಕ್ಕಳಿಗೆ ಗೌರವ ನೀಡುವುದು ಒಂದು ಸುಸಂದರ್ಭ. ಈ ನೆನಪು ಬದುಕಿನ ಉದ್ದಕ್ಕೂ ಇರುತ್ತದೆ. ಮಕ್ಕಳು ಸನ್ಮಾನ ಸ್ವೀಕರಿಸುವಾಗ ಪೋಷಕರಿಗೂ ಖುಷಿ. ಅರ್ಥಪೂರ್ಣ ಕಾರ್ಯಕ್ಕಮಕ್ಕೆ ಪ್ರೆಸ್ ಕ್ಲಬ್ ವೇದಿಕೆ ಆಗಿದೆ ಎಂದು ಹೇಳಿದರು. ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಹಿರಿಕರ ರವಿ ಅವರಿಗೆ ಕೆ.ಬಿ. ಮಹಂತೇಶ್ ಸ್ಮಾರಕ ಪ್ರೆಸ್ ಕ್ಲಬ್ ವಾರ್ಷಿಕ ಪರಿಣಾಮಕಾರಿ ವರದಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ಲಬ್ ಸದಸ್ಯರ ೩೧ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯದರ್ಶಿ ಕೆ.ಕೆ. ರೆಜಿತ್ ಕುಮಾರ್ ಗುಹ್ಯ ಸೇರಿದಂತೆ ಪ್ರೆಸ್ ಕ್ಲಬ್ ಪದಾಧಿಕಾರಿಗಳು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.