ಸಿದ್ದಾಪುರ, ಜೂ. ೨೫: ಕಾಫಿತೋಟಗಳಲ್ಲಿ ದಾಂಧಲೆ ನಡೆಸುತ್ತಾ ಮಾನವನ ಜೀವಹಾನಿ ಮಾಡಿದ್ದ ಸಲಗವೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಕಣ್ಣಂಗಾಲ ಹಾಗೂ ಬೈರಂಬಾಡ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದ್ದ ಅಂದಾಜು ೩೫ ವರ್ಷ ಪ್ರಾಯದ ಸಲಗವೊಂದನ್ನು ಭಾನುವಾರ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದರು.

ಅಮ್ಮತ್ತಿ ಭಾಗದ ಕಣ್ಣಂಗಾಲ ಗ್ರಾಮದಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆ ಅಭಿಮನ್ಯು ನೇತೃತ್ವದ ನಾಲ್ಕು ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆಗಿಳಿದ ತಂಡಕ್ಕೆ ಮಧ್ಯಾಹ್ನ ೨ ಗಂಟೆಗೆ ಕಣ್ಣಂಗಾಲ ಗ್ರಾಮದ ಮಚ್ಚಾರಂಡ ಕಿರಣ್ ಎಂಬವರ ಕಾಫಿ ತೋಟದೊಳಗೆ ಸಲಗÀ ಕಂಡು ಬಂತು. ಕೂಡಲೇ ಶಾರ್ಪ್ ಶೂಟರ್ ಕುಶಾಲನಗರ ವಲಯ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅವರು ಅರವಳಿಕೆ ಪ್ರಾಯೋಗಿಸಿದರು. ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ|| ಚಿಟ್ಟಿಯಪ್ಪ, ಡಾ|| ರಮೇಶ್ ಅವರುಗಳು ಸಹಕಾರ ನೀಡಿದರು.

ಅರವಳಿಕೆ ತಗುಲಿದ ಕೂಡಲೇ ಕಾಡಾನೆಯು ಓಡಾಡಿ ಸಮೀಪದ ಮಚ್ಚಾರಂಡ ಶಿವಾಜಿ ತಿಮ್ಮಯ್ಯ ಎಂಬವರ ಕಾಫಿ ತೋಟದಲ್ಲಿ ನೆಲಕ್ಕುರುಳಿತು. ಕೂಡಲೇ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಕಾಡಾನೆಯ ಕಾಲಿಗೆ ಹಗ್ಗ ಕಟ್ಟಿ ನಂತರ ಸಾಕಾನೆಗಳ ನೆರವಿನಿಂದ ಕಾಡಾನೆ ಯನ್ನು ಮೇಲಕ್ಕೆತ್ತಿದರು. ಸಾಕಾನೆಗಳ ನೆರವಿನಿಂದ ಕಾಡಾನೆಯನ್ನು ರಸ್ತೆಯ ಮೂಲಕ ಎಳೆದು ತರಲಾಯಿತು. ಆದರೆ ತೋಟದೊಳಗಿನಿಂದ ಬರಲು ಹಿಂದೇಟು ಹಾಕಿದ ಕಾಡಾನೆಯು ಲಾರಿಯ ಬಳಿ ಬರಲು ನಿರಾಕರಿಸಿ ದ್ದರಿಂದ ಸಾಕಾನೆ ಅಭಿಮನ್ಯು ಕಾಡಾನೆಯನ್ನು ದೂಡುತ್ತಾ ಲಾರಿಯ ಬಳಿಗೆ ಎಳೆದು ತಂದಿತು. ಸೆರೆಹಿಡಿದ ಕಾಡಾನೆಯನ್ನು ಬಂಡೀಪುರದಲ್ಲಿ ಬಿಡುವ ನಿಟ್ಟಿನಲ್ಲಿ ರೇಡಿಯೋ ಕಾಲರ್ ಅಳವಡಿಸ ಲಾಯಿತು. ಇದಾದ ಬಳಿಕ ಸಾಕಾನೆಗಳ ನೆರವಿನಿಂದ ಸೆರೆ ಹಿಡಿದ ಕಾಡಾನೆಯನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು.

೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸೆರೆಯಾದ ಸಲಗವು ಮಾನವನ ಮೇಲೆ ದಾಳಿ ನಡೆಸಿದ್ದ ಪರಿಣಾಮ ಈ ಹಿಂದೆ ಒಬ್ಬರು ಮೃತಪಟ್ಟಿದ್ದರು. ಅಲ್ಲದೇ ಈರ್ವರು ಗಂಭೀರ ಗಾಯಗೊಂಡಿದ್ದರು ಎಂದು ವೀರಾಜಪೇಟೆ ಡಿಸಿಎಫ್ ಶರಣಬಸಪ್ಪ ತಿಳಿಸಿದರು. ಇಂದಿನ ಕಾರ್ಯಾಚರಣೆಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಾದ ಅಭಿಮನ್ಯು, ಕರ್ನಾಟಕ ಭೀಮ, ಮಹಾರಾಷ್ಟç ಭೀಮ ಹಾಗೂ ನರೇಂದ್ರ ಎಂಬ ನಾಲ್ಕು ಸಾಕಾನೆಗಳು ಪಾಲ್ಗೊಂಡಿದ್ದವು. ಸರ್ಕಾರದಿಂದ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಸೇರಿರುವ ಪ್ರದೇಶಗಳಾದ ಅಮ್ಮತ್ತಿ ಭಾಗದಲ್ಲಿ ಎರಡು ಕಾಡಾನೆಗಳನ್ನು ಸೆರೆಹಿಡಿಯಲು ಅನಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಪಾಲಿಬೆಟ್ಟದ ಬಳಿ ಕಾರ್ಮಿಕರನ್ನು ಹತ್ಯೆ ಮಾಡಿದ್ದ ಕಾಡಾನೆಯನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವುದಾಗಿ ಶರಣ ಬಸಪ್ಪ ತಿಳಿಸಿದ್ದಾರೆ.

ಸಿದ್ದಾಪುರ ಭಾಗದ ಪಾಲಿಬೆಟ್ಟ ಅಮ್ಮತ್ತಿಯ ಇಂಜಿಲಗೇರಿಯ ಭಾಗದಲ್ಲಿ ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿನ್ನೆ ದಿನ ಗುರುತಿಸಿದ್ದರು. ಆದರೆ ಆ ಪುಂಡಾನೆಯು ಕಾರ್ಯಾಚರಣೆಯ ತಂಡಕ್ಕೆ ಭಾನುವಾರ ಸಿಗಲಿಲ್ಲ ಈ ಹಿನ್ನೆಲೆಯಲ್ಲಿ ಕಣ್ಣಂಗಾಲ ಗ್ರಾಮದಲ್ಲಿ ಕೃಷಿಫಸಲುಗಳನ್ನು ನಾಶಗೊಳಿಸಿ ಉಪಟಳ ನೀಡುತ್ತಿದ್ದ ಮತ್ತೊಂದು ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಡಿಸಿಎಫ್ ಶರಣಬಸಪ್ಪ, ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ದೇಯಂಡ ಸಂಜೀತ್ ಸೋಮಯ್ಯ ಹಾಗೂ ಡಾ|| ಚಿಟ್ಟಿಯಪ್ಪ, ಡಾ|| ರಮೇಶ್, ಅರಣ್ಯ ಸಿಬ್ಬಂದಿಗಳು, ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- ವರದಿ : ವಾಸು ಎ.ಎನ್.