ಕೂಡಿಗೆ, ಜೂ. ೨೩ : ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದ ಹಾಸನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕು ನಿವಾಸಿ ಗಂಗಾಧರ (೪೫) ಮೃತ ದುರ್ದೈವಿ.
ಕುಶಾಲನಗರದಲ್ಲಿ ಖಾಸಗಿ ಕಂಪನಿ ಸಿಬ್ಬಂದಿಯಾಗಿದ್ದ ಗಂಗಾಧರ ಕೂಡಿಗೆಯಲ್ಲಿ ಕೆಲಸ ಮುಗಿಸಿ ಕೂಡ್ಲೂರಿನ ನಿವಾಸದತ್ತ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಹಾಸನದಿಂದ ಕೈಗಾರಿಕಾ ಬಡಾವಣೆಯತ್ತ ಆಗಮಿಸುತ್ತಿದ್ದ ಸಿಮೆಂಟ್ ತುಂಬಿದ್ದ ಟೆನ್ ವೀಲರ್ ಲಾರಿ (ಕೆಎ.೪೦.ಎ.೨೫೦೮) ಅಡಿಗೆ ಬೈಕ್ (ಕೆಎ.೧೭.ಇಯು.೩೯೩೦) ಸಿಲುಕಿಕೊಂಡ ಪರಿಣಾಮ ಸವಾರನ ಮೈಮೇಲೆ ಲಾರಿ ಹರಿದಿದೆ. ಪರಿಣಾಮ ಗಂಗಾಧರನ ದೇಹ ಎರಡು ತುಂಡುಗಳಾಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.