ಗುಡ್ಡೆಹೊಸೂರು, ಜೂ. ೨೪ : ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಚಿಕ್ಲಿಹೊಳೆ ಜಲಾಶಯದ ಮೂಲಕ ನೀರು ಹರಿಸಲು ಸಹಕಾರಿಯಾಗಿರುವ ಕಾಲುವೆಗಳು ನಿರ್ವಹಣೆ ಇಲ್ಲದೆ ದುಸ್ಥಿತಿ ಹಂತದಲ್ಲಿದೆ. ಗಿಡಗಂಟಿ ಬೆಳೆದು, ಹೂಳು ತುಂಬಿ ಜಲಮೂಲಗಳು ಸೊರಗಿವೆ..!
ರೈತರ ಕೃಷಿಭೂಮಿಗಳಿಗೆ ನೀರು ಪೂರೈಸುವ ಉದ್ದೇಶದಿಂದ ಡ್ಯಾಂ ಮೂಲಕ ಈ ಕಾಲುವೆಗಳನ್ನು ನಿರ್ಮಿಸಲಾಗಿದೆ. ಆದರೆ, ಇದು ಸದ್ಬಳಕೆಯಾಗದೆ ಕೃಷಿಕರು ಭತ್ತ ಬೆಳೆಯುವುದರಿಂದ ದೂರ ಸರಿದು ಹಲವು ವರ್ಷಗಳೇ ಕಳೆದಿವೆ. ಗದ್ದೆಗಳು ತೋಟಗಳಾಗಿ ಪರಿವರ್ತನೆಗೊಂಡಿವೆ. ಇದಕ್ಕೆ ಕಾರ್ಮಿಕರ, ವನ್ಯಜೀವಿಗಳ ಸಮಸ್ಯೆಯೊಂದಿಗೆ ಸಕಾಲಕ್ಕೆ ಕಾಲುವೆ ನೀರು ದೊರೆಯದಿರುವುದು ಒಂದು ಮೂಲ ಕಾರಣವಾಗಿದೆ.
ಇವೆಲ್ಲ ವ್ಯತಿರಿಕ್ತ ಪರಿಣಾಮದ ನಡುವೆ ರಂಗಸಮುದ್ರ, ನಂಜರಾಯಪಟ್ಟಣ. ಹೊಸಪಟ್ಟಣ, ಬಾಳುಗೋಡು, ಬೆಟ್ಟಗೇರಿ, ಬಸವನಹಳ್ಳಿಯ ವ್ಯಾಪ್ತಿಯ ಕೆಲ ಕೃಷಿಕರು ಭತ್ತದ ಕೃಷಿಯಲ್ಲಿ ತೊಡಗಿದ್ದಾರೆ. ಆದರೆ ಆ ನಾಲೆಯ ದುಸ್ಥಿತಿಯಿಂದ ನೀರು ದೊರೆಯದೆ ರೈತರು ಹೈರಾಣಾಗಿ ಕಾಲುವೆಗಳಿಗೆ ಕಾಯಕಲ್ಪ ಒದಗಿಸಲು ಆಗ್ರಹಿಸಿದ್ದಾರೆ.
ಕಾಲುವೆಗಳಲ್ಲಿ ಕಾಡು ಬೆಳೆದು, ಹೂಳು ತುಂಬಿ ನೀರು ಸರಾಗವಾಗಿ ಹರಿಯದೆ ನೀರಿನಿಂದ ಜನ ವಂಚಿತರಾಗುತ್ತಿದ್ದಾರೆ.
ಭತ್ತದ ಸಸಿಮಡಿ ತಯಾರಿಸಲು ನೀರು ಒದಗಿಸಬೇಕಾಗಿದೆ. ಆದರೆ, ರೈತರು ವಿವಿಧ ಜಲಮೂಲಗಳಿಂದ ಭತ್ತದ ಸಸಿ ತಯಾರು ಮಾಡಿಕೊಂಡು ನಾಟಿ ಪ್ರಾರಂಭಿಸುವ ಸಮಯದಲ್ಲಿ ಕಾಲುವೆಯೊಳಗಿನ ಕಾಡನ್ನು ಕಡೆಯಲು ಸಂಬAಧಪಟ್ಟ ಇಲಾಖೆ ಪ್ರಾರಂಭಿಸುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೃಷಿಕರು ಆರೋಪಿಸಿದ್ದಾರೆ.
ಅಣೆಕಟ್ಟೆಗೆ ಸಂಬAಧಿಸಿದ ಎಡದಂಡೆ ೧೨ ಕಿ.ಮೀ ಹೊಸಪಟ್ಟಣ ವಿಭಾಗವಾದರೆ, ಸುಮಾರು ೨೪ ಕಿ.ಮೀ ಬಲದಂಡೆ ಕುಶಾಲನಗರದ ಸುಂದರ ನಗರದ ತನಕ ಈ ಕಾಲುವೆ ಇದೆ. ಆದರೆ, ರೈತರಿಗೆ ಇದರಿಂದ ಯಾವ ಪ್ರಯೋಜನವಿಲ್ಲ. ಚಿಕ್ಲಿಹೊಳೆ ಜಲಾಶಯವನ್ನು ೧೯೭೮ ರಲ್ಲಿ ನಿರ್ಮಿಸಲಾಯಿತು. ಕಂದಾಯ ಇಲಾಖೆಯ ವತಿಯಿಂದ ನೀರಿನ ಕಂದಾಯ ವಸೂಲಿ ಮಾಡಲಾಗುತ್ತಿದೆ. ಆದರೆ ಕಾಲುವೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
-ಗಣೇಶ್ ಕುಡೆಕ್ಕಲ್