ಸುAಟಿಕೊಪ್ಪ, ಜೂ. ೨೪: ಕಾಡಾನೆಯೊಂದು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ ಬಾನೆಟ್‌ಗೆ ಹಾನಿಪಡಿಸಿರುವ ಘಟನೆ ನಡೆದಿದೆ.
ಕಾರಿನಲ್ಲಿದ್ದ ದಂಪತಿ ಅದೃಷ್ಟವಶಾತ್ ಕಾಡಾನೆಯ ಹಿಡಿತದಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತಿಕಾಡುವಿನ ಕೋರನ ಲೀಲಾ ಕಾಂತ್ (ಟಿಪ್ಪು) ಎಂಬವರು ಕಾರಿನಲ್ಲಿ ಪತ್ನಿಯೊಂದಿಗೆ ಸುಂಟಿಕೊಪ್ಪದಿAದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗಮಧ್ಯದ ಕುಟ್ಟೋಟ್ಟಿ ಲೈನ್ ಮನೆ ಸಮೀಪದಲ್ಲಿ ತೋಟದೊಳಗಿದ್ದ ಕಾಡಾನೆಯೊಂದು ಕಾರನ್ನು ಅಡ್ಡಗಟ್ಟಿದೆ.
ಅಪಾಯದ ಸುಳಿವರಿತ ಟಿಪ್ಪು ಮತ್ತು ಅವರ ಪತ್ನಿ ಕ್ಷಣಮಾತ್ರದಲ್ಲಿ ಕಾರಿನಿಂದ ಇಳಿದು ಅಲ್ಲಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ. ಆಕ್ರೋಶಭರಿತ ಆನೆ ಕಾರಿನ ಬಾನೆಟ್ ಅನ್ನು ಗುದ್ದಿ ಹಾನಿಪಡಿಸಿ ಅಲ್ಲಿಂದ ಮರೆಯಾಗಿದೆ. ಇಂದು ಬೆಳಗ್ಗೆಯಿಂದ ಮತ್ತಿಕಾಡು ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯ ವೇಳೆ ಓಡಿಬಂದಿರುವ ಸಲಗ ಕಾರಿನ ಮೇಲೆ ದಾಳಿ ಮಾಡಿರುವುದಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.