ನಾಪೋಕ್ಲು, ಜೂ. ೨೩: ಕಾಡಾನೆಗಳು ಮನುಷ್ಯರನ್ನು ಕಂಡೊಡನೆ ಅಟ್ಟಾಸಿಕೊಂಡು ಬಂದು ತಿವಿದು, ತುಳಿದು, ಕೊಂದು ಹಾಕಿರುವ ಘಟನೆಗಳು ಕೊಡಗು ಜಿಲ್ಲೆ ಸೇರಿದಂತೆ ಅಲ್ಲಲ್ಲಿ ನಡೆಯುತ್ತಲೇ ಇದೆ. ಅದರೊಂದಿಗೆ ವಾಹನಗಳನ್ನು ಅಡ್ಡಗಟ್ಟಿ, ಮನೆಗಳನ್ನು ಧ್ವಂಸ ಮಾಡಿ ಕಾಡಾನೆಗಳು ದಾಂಧಲೆ ನಡೆಸುವುದೂ ಇದೆ.

ಆದರೆ ಇಲ್ಲಿ ವ್ಯಕ್ತಿಯೊಬ್ಬರು ಕಾಡಾನೆ ಮುಂದೆ ಬಂದು ನಿಂತರೂ ಅವರನ್ನು ಅದು ಏನೂ ಮಾಡದೇ ವಾಪಾಸು ಹೊರಟು ಹೋದ ಘಟನೆ ಸಮೀಪದ ಕುಂಜಿಲ ಗ್ರಾಮದಲ್ಲಿ ನಡೆದಿದೆ. ಕಾಡಾನೆ ಮುಂದೆ ನಿಂತು ಪ್ರಾಣ ಉಳಿಸಿಕೊಂಡವರು ಗ್ರಾಮದ ನಂಬಡಮAಡ ಶಂಭು ನಂಜಪ್ಪ.

೭೮ ವರ್ಷ ಪ್ರಾಯದ ಇವರು ತಾ. ೨೨ರ ಬೆಳಿಗ್ಗೆ ಸುಮಾರು ೬.೩೦ ಗಂಟೆಗೆ ತನ್ನ ಆಸರೆಗಿರುವ ಊರುಗೋಲು ಹಿಡಿದು ಮನೆ ಸಮೀಪದ ಮಾವಿನ ಮರದ ಬುಡಕ್ಕೆ ಹಣ್ಣು ಹೆಕ್ಕಲು ತೆರಳಿದ್ದರು. ಕೆಲವು ಮಾವಿನ ಹಣ್ಣುಗಳನ್ನು ಹೆಕ್ಕಿದ ನಂತರ ಒಂದೆರಡು ಮಾವಿನ ಹಣ್ಣುಗಳನ್ನು ಯಾವುದೋ ಪ್ರಾಣಿ ತಿಂದು ಹಾಕಿರುವುದು ಗೋಚರಿಸಿದೆ. ಕಾಡು ಹಂದಿಯಾಗಿರಬಹುದು ಎಂದು ಇವರು ಸುಮ್ಮನಿದ್ದರು. ಸರಿಯಾಗಿ ಗಮನಿಸಿದಾಗ ಸಮೀಪದ ಬಾಳೆ ಗಿಡ ಚಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ತಲೆ ಎತ್ತಿ ನೋಡುವ ಸಂದರ್ಭ ಕೆಲವೇ ಅಡಿಗಳ ಅಂತರದಲ್ಲಿ ತಮ್ಮ ಮುಂದೆ ಆನೆಯೊಂದು ತನ್ನ ಕೋರೆಯ ಮೇಲೆ ಸೊಂಡಿಲು ಇರಿಸಿಕೊಂಡು ಸುಮ್ಮನೆ ನಿಂತಿರುವುದು ಕಂಡುಬAದಿದೆ. ದಿಕ್ಕು ತೋಚದ ಇವರು ಊರುಗೋಲನ್ನು ಸುತ್ತ ಬೀಸುತ್ತಾ ಶಕ್ತಿ ಮೀರಿ ಕಿರುಚಿದ್ದಾರೆ. ಇದನ್ನು ಕಂಡು ಎರಡು ಹಜ್ಜೆ ಮುಂದೆ ಬಂದ ಕಾಡಾನೆ ತಿರುಗಿ ಕಾಫಿ ತೋಟದ ಒಳಗೆ ಹೋಗುವುದರ ಮೂಲಕ ನಂಜಪ್ಪ ಅವರಿಗೆ ಪ್ರಾಣ ಭಿಕ್ಷೆ ನೀಡಿದೆ. ಆಯಸ್ಸು ಗಟ್ಟಿಯಿದ್ದರೆ ಏನು ಬೇಕಾದರು ಆಗಬಹುದು ಎಂಬುದಕ್ಕೆ ಇದುವೇ ಸಾಕ್ಷಿ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ನಂಜಪ್ಪ, ನಾನು ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು, ಕಾಫಿ ತೋಟಕ್ಕೆ ತೆರಳುವ ಬೆಳೆಗಾರರು, ಕಾರ್ಮಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ತನಗಾದ ಘಟನೆಯನ್ನು ವಿವರಿಸಿದರು.

ಘಟನೆ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಕಾಡಾನೆಯನ್ನು ಕಾಡಿಗಟ್ಟಲು ಕ್ರಮಕೈಗೊಂಡಿದ್ದಾರೆ.

- ಪಿ.ವಿ.ಪ್ರಭಾಕರ್