ಸೋಮವಾರಪೇಟೆ, ಜೂ. ೨೩: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದು, ಸರ್ವರ್ ಡೌನ್‌ನಿಂದಾಗಿ ಕಾಲಹರಣಕ್ಕೆ ಕಾರಣವಾಗಿದೆ.

ಗ್ರಾಮ ಒನ್ ಕೇಂದ್ರಗಳು, ಸಿಎಸ್‌ಸಿ ಕೇಂದ್ರಗಳು, ಕಂಪ್ಯೂಟರ್ ಅಂಗಡಿಗಳಲ್ಲಿ ಸಾರ್ವಜನಿಕರು ಗಂಟೆ ಗಟ್ಟಲೆ ಕಾಯುವಂತಾಗಿದ್ದು, ಈ ತಿಂಗಳ ಬಿಲ್ ಬರುವುದರೊಳಗೆ ನೋಂದಣಿ ಮಾಡಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಅಂತಿಮ ದಿನಾಂಕವನ್ನು ನಿಗದಿ ಪಡಿಸದಿದ್ದರೂ ಸಹ ಸಾರ್ವಜನಿಕರು ತಮ್ಮ ಮನೆಯ ವಿದ್ಯುತ್ ಸಂಪರ್ಕ ನೋಂದಣಿ ಆದರೆ ಸಾಕು ಎಂದು ಕೇಂದ್ರಗಳ ಮುಂದೆ ಆಧಾರ್ ಹಾಗೂ ವಿದ್ಯುತ್ ಬಿಲ್ ಹಿಡಿದು ಕಾಯುತ್ತಿದ್ದಾರೆ.

ಮಾಸಿಕ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾವಣೆ ಮಾಡಿಕೊಳ್ಳಬೇಕಿದ್ದು, ಈ ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಕಳೆದ ತಾ. ೧೮ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದರೂ ಈವರೆಗೆ ಸರ್ವರ್ ಡೌನ್ ಸಮಸ್ಯೆ ಪರಿಹಾರ ಕಂಡಿಲ್ಲ. ಪರಿಣಾಮ ಕೆಲಸ ಕಾರ್ಯ ಬಿಟ್ಟು ಗ್ರಾಹಕರು ಕೇಂದ್ರಗಳೆದುರು ಕಾಲ ಕಳೆಯುತ್ತಿದ್ದಾರೆ.

ಸೇವಾ ಸಿಂಧು ಪೋರ್ಟಲ್‌ನ ಗ್ಯಾರಂಟಿ ಸ್ಕೀಮ್‌ನ ಪುಟ ತೆರೆದುಕೊಳ್ಳಲು ಒಂದಷ್ಟು ಸಮಯ ವ್ಯಯವಾದರೆ, ನಂತರ ಕ್ಯಾಪ್ಚಾ ನಮೂದಿಸಿ ಮುಂದಿನ ಹಂತಕ್ಕೆ ತೆರಳಲು ಮತ್ತಷ್ಟು ಸಮಯ ಬೇಕಾಗುತ್ತಿದೆ. ಇದಾದ ನಂತರ ಗ್ರಾಹಕರ ಆಧಾರ್ ಸಂಖ್ಯೆ, ವಿದ್ಯುತ್ ಸಂಪರ್ಕ ಸಂಖ್ಯೆಯನ್ನು ನಮೂದಿಸಿದರೆ, ಅದರ ಮಾಹಿತಿಗಳು ‘ಫ್ಲೆಟ್ಚ್’ ಆಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಸಂವಹನದ ಮೊಬೈಲ್ ಸಂಖ್ಯೆ ನಮೂದಿಸಿ, ಅಗ್ರೀ ಬಟನ್ ಕ್ಲಿಕ್ಕಿಸಿ, ಸಬ್ಮಿಟ್ ಕ್ಲಿಕ್ ಮಾಡಿದರೆ ಮುಂದಿನ ಹಂತಕ್ಕೆ ಹೋಗದೇ ವೆಬ್‌ಸೈಟ್ ಕ್ರಾಶ್ ಆಗುತ್ತಿದೆ.

ಇದಾದ ನಂತರ ಮತ್ತೆ ಪುಟ ತೆರೆದುಕೊಳ್ಳಲು ಸಮಯ ಹಿಡಿಯುತ್ತಿದೆ. ಒಮ್ಮೊಮ್ಮೆ ಮಾತ್ರ ಶೀಘ್ರಗತಿಯಲ್ಲಿ ನೋಂದಣಿಯಾದರೆ ಮತ್ತೆ ಎಂದಿನAತೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಒಮ್ಮೊಮ್ಮೆ ಅರ್ಜಿ ತೆರೆದುಕೊಂಡರೂ ಸಹ ಡೇಟಾವನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಅಕೌಂಟ್ ನಂಬರ್ ಭರ್ತಿ ಮಾಡಿದ ತಕ್ಷಣ ವೆಬ್‌ಸೈಟ್ ಕಾರ್ಯನಿರ್ವಹಣೆಯನ್ನು ನಿಲ್ಲಿಸುತ್ತಿದ್ದು, ಮುಂದಿನ ಮಾಹಿತಿ ಭರ್ತಿ ಆಗುತ್ತಿಲ್ಲ ಎಂದು ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯೋರ್ವರು ಮಾಹಿತಿ ನೀಡಿದ್ದಾರೆ.

ಇದು ಒಂದೆಡೆಯಾದರೆ ಮತ್ತೊಂದೆಡೆ ಮನೆಗೆ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರು ಮರಣ ಹೊಂದಿರುವ ಪ್ರಕರಣಗಳಲ್ಲಿ, ಖಾತೆದಾರರ ಹೆಸರು ಬದಲಾವಣೆ ಮಾಡಿಕೊಳ್ಳದ ಹಿನ್ನೆಲೆ ಇದೀಗ ಫಜೀತಿ ಎದುರಿಸುವಂತಾಗಿದೆ.

ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಗ್ರಾಹಕರ ಆಧಾರ್ ಮಾಹಿತಿ ಕಡ್ಡಾಯವಾಗಿದೆ. ಆದರೆ ಕಳೆದ ೧೫ ರಿಂದ ೨೦ ವರ್ಷಗಳ ಹಿಂದೆಯೇ ಮನೆ ಯಜಮಾನ, ಯಜಮಾನಿ ಮೃತಪಟ್ಟಿರುವ ಪ್ರಕರಣಗಳಲ್ಲಿ, ಇದೀಗ ಸಮಸ್ಯೆ ಎದುರಾಗುತ್ತಿದೆ. ಆಧಾರ್ ಕಾರ್ಡ್ ಚಾಲ್ತಿಗೆ ಬರುವುದಕ್ಕೂ ಮುನ್ನ ವಾಸ ದೃಢೀಕರಣ ಪತ್ರದ ಆಧಾರದ ಮೇಲೆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು.

ತಾಲೂಕಿನ ಬಹುತೇಕ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದು, ಹಲವಷ್ಟು ಹಳೆಯ ಮನೆಗಳ ಯಜಮಾನ/ಯಜಮಾನಿ ಮೃತಪಟ್ಟಿದ್ದಾರೆ. ಈ ಹಿಂದೆ ಅವರುಗಳ ಹೆಸರಿನಲ್ಲಿಯೇ ವಿದ್ಯುತ್ ಸಂಪರ್ಕ ಪಡೆದಿದ್ದರಿಂದ ಈಗಲೂ ಸಹ ಬಿಲ್ ಅವರ ಹೆಸರಿಗೆ ಬರುತ್ತಿದೆ. ಆದರೆ ವಿದ್ಯುತ್ ಶುಲ್ಕವನ್ನು ಈಗ ವಾಸವಿರುವ ಮಂದಿ ಪಾವತಿಸಿಕೊಂಡು ಬರುತ್ತಿದ್ದಾರೆ. ತಮ್ಮ ಅಜ್ಜ, ಅಜ್ಜಿ, ತಂದೆ, ತಾಯಿ, ಸಂಬAಧಿಕರ ಹೆಸರಿನಲ್ಲಿರುವ ವಿದ್ಯುತ್ ಸಂಪರ್ಕದ ಖಾತೆದಾರರ ಹೆಸರನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳದ ಹಿನ್ನೆಲೆ ಇದೀಗ ಸೆಸ್ಕ್ ಕಚೇರಿಗೆ ಎಡತಾಕುತ್ತಿದ್ದಾರೆ.

ವಿದ್ಯುತ್ ಖಾತೆದಾರರ ಹೆಸರು ಬದಲಾವಣೆ ಮಾಡಿಕೊಳ್ಳಲು ವಾಸದ ಮನೆಗೆ ಸಂಬAಧಿಸಿದ ಆರ್‌ಟಿಸಿ, ೯ ಅಂಡ್ ೧೧ ನಮೂನೆ ಸೇರಿದಂತೆ ಇನ್ನಿತರ ದಾಖಲೆಗಳು ಕಡ್ಡಾಯವಾಗಿವೆ. ಇದರೊಂದಿಗೆ ೨೦೦ ರೂ. ಮುಖಬೆಲೆಯ ಛಾಪಾ ಕಾಗದ, ನೋಟರಿಯಿಂದ ಅಫಿಡವಿಟ್ ನೊಂದಿಗೆ, ಮೂಲ ಖಾತೆದಾರರಿಗೆ ಸಂಬAಧಿಸಿದ ದಾಖಲೆಗಳು, ಬದಲಾವಣೆಗೆ ಅರ್ಜಿ ಸಲ್ಲಿಸುವವರ ದಾಖಲೆಗಳೊಂದಿಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಿದೆ.

ಇಷ್ಟೆಲ್ಲಾ ದಾಖಲಾತಿಯನ್ನು ಸೆಸ್ಕ್ಗೆ ಸಲ್ಲಿಸಿದ ನಂತರ ಕನಿಷ್ಟ ೧ ವಾರದವರೆಗೆ ಕಾಯಬೇಕಿದ್ದು, ನಂತರ ವಿದ್ಯುತ್ ಸಂಪರ್ಕದಲ್ಲಿ ಖಾತೆ ಬದಲಾವಣೆಯಾಗಲಿದೆ. ಆ ನಂತರವಷ್ಟೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಿದೆ.

ಚುನಾವಣಾ ಪೂರ್ವದಲ್ಲಿ ಎಲ್ಲಾ ಮನೆಗಳಿಗೆ ೨೦೦ ಯೂನಿಟ್ ವಿದ್ಯುತ್ ಉಚಿತ ಎಂಬ ಗ್ಯಾರಂಟಿ ನೀಡಿದ್ದ ಈಗಿನ ಮುಖ್ಯಮಂತ್ರಿಗಳು, ಸರ್ಕಾರ ರಚನೆಗೊಂಡ ನಂತರ ಹಲವಷ್ಟು ನಿಬಂಧನೆಗಳನ್ನು ವಿಧಿಸುತ್ತಿರುವುದು ಸರಿಯಲ್ಲ ಎಂದು ವಿಪಕ್ಷದ ಮಂದಿ ಆರೋಪಿಸಿದರೆ, ಉಚಿತ ವಿದ್ಯುತ್ ಬೇಕಿದ್ದವರು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಪಡೆದುಕೊಳ್ಳಬೇಕು. ಇಲಾಖೆ ಕೇಳುವ ದಾಖಲಾತಿಗಳನ್ನು ಹೊಂದಿಸಿ ಕೊಳ್ಳಬೇಕು ಎಂದು ಆಡಳಿತ ಪಕ್ಷದವರು ಸಮರ್ಥನೆಗೆ ಇಳಿದಿದ್ದಾರೆ.

ಒಟ್ಟಾರೆ ಯಾವುದೇ ತಾಪತ್ರಯವಿಲ್ಲದೇ ನಮ್ಮ ಮನೆಗೆ ಉಚಿತ ವಿದ್ಯುತ್ ಲಭಿಸುತ್ತದೆ ಎಂದೇ ಭಾವಿಸಿದ್ದ ಮಂದಿ ಇದೀಗ ಗೃಹಜ್ಯೋತಿ ನೋಂದಣಿಗಾಗಿ ಕಚೇರಿಗಳೆದುರು ಕಾಲ ಕಳೆಯುತ್ತಿದ್ದಾರೆ. ಜೊತೆಜೊತೆಗೆ ಮೃತಪಟ್ಟವರ ಹೆಸರಿನಲ್ಲಿರುವ ವಿದ್ಯುತ್ ಸಂಪರ್ಕದ ಖಾತೆಯನ್ನು ಬದಲಾಯಿಸಿಕೊಳ್ಳಲು ಒಂದಿಷ್ಟು ಮಂದಿ ಸೆಸ್ಕ್ ಕಚೇರಿ, ನೋಟರಿ ವಕೀಲರ ಕಚೇರಿಗಳಿಗೆ ಎಡತಾಕುತ್ತಿದ್ದಾರೆ.

- ವಿಜಯ್